Ola-Uber: ಪ್ರಮುಖ ಕ್ಯಾಬ್ ಸೇವೆಯಾದ ಓಲಾ ಜೊತೆ ವಿಲೀನವಾಗುತ್ತಾ ಉಬರ್?; ಇಲ್ಲಿದೆ ಉತ್ತರ
ಕ್ಯಾಬ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಓಲಾ-ಉಬರ್ ಸಂಸ್ಥೆಗಳು ವಿಲೀನವಾಗಲಿವೆ ಎಂಬ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಓಲಾ ಸಿಇಓ ಟ್ವಿಟ್ಟರ್ನಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ಕ್ಯಾಬ್ ಸೇವೆ ಒದಗಿಸುವ ಪ್ರಮುಖ ಸಂಸ್ಥೆಗಳಾದ ಓಲಾ (Ola) ಮತ್ತು ಉಬರ್ (Uber) ವಿಲೀನವಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಓಲಾ ಸಿಇಓ ಭವಿಷ್ ಅಗರ್ವಾಲ್ (Bhavish Aggarwal) ಈ ಬಗ್ಗೆ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಸದ್ಯಕ್ಕೆ ಹೊಸ ಹೊಸ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಭಾರತದಲ್ಲಿ ಪರಿಚಯಿಸಲಾಗಿದ್ದರೂ ಉಬರ್ ಮತ್ತು ಓಲಾ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಕ್ಯಾಬ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಈ ಎರಡು ಸಂಸ್ಥೆಗಳು ವಿಲೀನವಾಗಲಿವೆ ಎಂಬ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಓಲಾ ಸಿಇಓ ಟ್ವಿಟ್ಟರ್ನಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಓಲಾದ ಸಹ-ಸಂಸ್ಥಾಪಕ ಮತ್ತು ಸಿಇಓ ಭವಿಷ್ ಅಗರ್ವಾಲ್ ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹಿರಿಯ ಉಬರ್ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದರು. ಆದರೆ, ಉಬರ್ ಜೊತೆ ಓಲಾವನ್ನು ವಿಲೀನಗೊಳಿಸುವ ವದಂತಿಯನ್ನು ಭವಿಷ್ ಅಗರ್ವಾಲ್ ತಳ್ಳಿಹಾಕಿದ್ದಾರೆ. “ಇದು ಶುದ್ಧ ಸುಳ್ಳು ಸುದ್ದಿ. ಓಲಾ ಕಂಪನಿಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ, ಲಾಭದಲ್ಲಿದೆ. ಹಲವೆಡೆ ನಾವು ನಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದೇವೆ. ನಾವು ಎಂದಿಗೂ ಬೇರಾವುದೇ ಸಂಸ್ಥೆಯೊಂದಿಗೆ ವಿಲೀನವಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Uber: ದೆಹಲಿಯಲ್ಲಿ ಕ್ಯಾಬ್ ಚಾಲಕನಿಂದ ಅತ್ಯಾಚಾರ ಪ್ರಕರಣ; ಭಾರತದ ದೋಷಪೂರಿತ ವ್ಯವಸ್ಥೆಯೇ ಕಾರಣವೆಂದು ಉಬರ್ ಆರೋಪ
ಓಲಾ- ಉಬರ್ ವಿಲೀನದ ಬಗ್ಗೆ ಪ್ರಕಟವಾಗಿರುವ ಸುದ್ದಿಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಭವಿಷ್ ಅಗರ್ವಾಲ್, “ಈ ವರದಿ ತಪ್ಪು ಮಾಹಿತಿ ನೀಡಿದೆ. ನಾವು ಉಬರ್ ಜೊತೆ ವಿಲೀನದ ಮಾತುಕತೆ ನಡೆಸಿಲ್ಲ. ಆ ಬಗ್ಗೆ ನಾವು ಯೋಚನೆಯನ್ನೂ ಮಾಡಿಲ್ಲ.” ಎಂದು ಭವಿಷ್ ಟ್ವೀಟ್ ಮಾಡಿದ್ದಾರೆ.
Absolute rubbish. We’re very profitable and growing well. If some other companies want to exit their business from India they are welcome to! We will never merge. https://t.co/X3wC9HDrnr
— Bhavish Aggarwal (@bhash) July 29, 2022
ಉಬರ್ ತನ್ನ ಸ್ಥಳೀಯ ಆಹಾರ ವಿತರಣಾ ಸೇವೆಯಾದ ಉಬರ್ ಈಟ್ಸ್ ಅನ್ನು 2022ರ ಜನವರಿಯಲ್ಲಿ ಜೊಮಾಟೊಗೆ ಮಾರಾಟ ಮಾಡಿತು. ಬಳಿಕ, ಓಲಾ ತನ್ನ ದಿನಸಿ ವಿತರಣಾ ಸೇವೆಯನ್ನು ಸ್ಥಗಿತಗೊಳಿಸಿತು. ಇತ್ತೀಚೆಗೆ ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಮಾಡಿದೆ.
Published On - 8:52 am, Sat, 30 July 22