ಲಂಚ ಪ್ರಕರಣ: ಪಂಜಾಬ್ ಮಾಜಿ ಸಚಿವ ಸುಂದರ್ ಶಾಮ್ ಅರೋರಾ ಬಂಧನ
ಸುಂದರ್ ಆರೋರಾ ತಮ್ಮ ಮೇಲಿರುವ ಪ್ರಕರಣದಿಂದ ಹೊರಬರುವುದಕ್ಕೆ ಸಹಾಯ ಮಾಡಲು ವಿಜಿಲೆನ್ಸ್ ಅಧಿಕಾರಿಗೆ ₹ 50 ಲಕ್ಷ ಲಂಚ ನೀಡುವುದಾಗಿ ಹೇಳಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಚಂಡೀಗಢ: ತಮ್ಮ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥಪಡಿಸಲು ತನ್ನ ಅಧಿಕಾರಿಯೊಬ್ಬರಿಗೆ ₹ 50 ಲಕ್ಷ ಲಂಚ ನೀಡಿದ ಆರೋಪದ ಮೇಲೆ ಪಂಜಾಬ್ (Punjab) ಮಾಜಿ ಸಚಿವ ಸುಂದರ್ ಶಾಮ್ ಅರೋರಾ (Sunder Sham Arora) ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೋ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸುಂದರ್ ಅರೋರಾ ಅವರು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದ್ದು ಸುಂದರ್ ಆರೋರಾ ತಮ್ಮ ಮೇಲಿರುವ ಪ್ರಕರಣದಿಂದ ಹೊರಬರುವುದಕ್ಕೆ ಸಹಾಯ ಮಾಡಲು ವಿಜಿಲೆನ್ಸ್ ಅಧಿಕಾರಿಗೆ ₹ 50 ಲಕ್ಷ ಲಂಚ ನೀಡುವುದಾಗಿ ಹೇಳಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಸುಂದರ್ ಅರೋರಾ ಅವರು ಅಕ್ಟೋಬರ್ 14 ರಂದು ವಿಚಾರಣೆಯನ್ನು ಮೇಲ್ವಿಚಾರಣೆ ಮಾಡುವ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಮನಮೋಹನ್ ಶರ್ಮಾ ಅವರನ್ನು ಸಂಪರ್ಕಿಸಿದ್ದಾರೆ. ಆರೋರಾ ಅವರ ಹೆಸರನ್ನು ಅದರಿಂದ ತೆಗೆದುಹಾಕುವುದಕ್ಕಾಗಿ ಸಹಾಯ ಮಾಡಲು ಕೇಳಿಕೊಂಡರು ಎಂದು ಕುಮಾರ್ ಹೇಳಿದ್ದಾರೆ. ಅದಕ್ಕಾಗಿ ₹ 1 ಕೋಟಿ ನೀಡಲು ಮಾಜಿ ಸಚಿವರು ಮುಂದಾಗಿದ್ದರು. ಮೊದಲ ಕಂತಾಗಿ ₹ 50 ಲಕ್ಷ ಪಾವತಿಸಿ ಉಳಿದ ಮೊತ್ತವನ್ನು ನಂತರ ಕೊಡುವುದಾಗಿ ಮುಖ್ಯ ನಿರ್ದೇಶಕರು ಹೇಳಿದ್ದರು.
ಶರ್ಮಾ ಅವರು ತಮ್ಮ ವರಿಷ್ಠರ ಗಮನಕ್ಕೆ ತಂದ ನಂತರ, ಅರೋರಾ ಅವರನ್ನು ಬಂಧಿಸಲು ಬಲೆ ಬೀಸಲಾಯಿತು. ₹ 50 ಲಕ್ಷ ನಗದು ಇರುವ ಬ್ಯಾಗನ್ನು ಹಸ್ತಾಂತರಿಸಲು ಯತ್ನಿಸಿದಾಗ ಅವರನ್ನು ಬಂಧಿಸಲಾಗಿದೆ ಎಂದು ಕುಮಾರ್ ತಿಳಿಸಿದರು. ಈ ವರ್ಷ ಜೂನ್‌ನಲ್ಲಿ ಕಾಂಗ್ರೆಸ್ ತೊರೆದ ನಂತರ ಸುಂದರ್ ಅರೋರಾ ಬಿಜೆಪಿಗೆ ಸೇರಿದ್ದರು.