Jagannath Rath Yatra 2022: ಇಂದಿನಿಂದ ಪೂರಿ ಜಗನ್ನಾಥ ರಥಯಾತ್ರೆ: ಹರಿದು ಬರುತ್ತಿದೆ ಜನಸಾಗರ, 2 ವರ್ಷಗಳ ನಂತರ ತೇರು ಕಣ್ತುಂಬಿಕೊಳ್ಳುವ ಕಾತರ
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ರಥಯಾತ್ರೆಯಲ್ಲಿ ಹೆಚ್ಚು ಜನರು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಭುವನೇಶ್ವರ: ಒಡಿಶಾದ ಪೂರಿಯಲ್ಲಿ ಜಗನ್ನಾಥ ರಥಯಾತ್ರೆ (Puri Jagannath Yatra) ಕಣ್ತುಂಬಿಕೊಳ್ಳಲು ಜನಸಾಗರ ನೆರೆಯುತ್ತಿದೆ. ಭವ್ಯ ರಥದಲ್ಲಿ ಸಾಗಿಬರುವ ಜಗನ್ನಾಥ, ಬಲಭದ್ರ, ದೇವಿ ಸುಭದ್ರೆಯರನ್ನು (Lord Balabhadra, Devi Subhadra and Lord Jagannath) ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ರಥಯಾತ್ರೆಯಲ್ಲಿ ಹೆಚ್ಚು ಜನರು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಜಗನ್ನಾಥ ರಥಯಾತ್ರೆಯು ಜುಲೈ 9ಕ್ಕೆ ಸಂಪನ್ನಗೊಳ್ಳಲಿದೆ. ಬೃಹತ್ ಧಾರ್ಮಿಕ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರತಿ ಬಾರಿಯೂ ರಥಯಾತ್ರೆ ನಡೆಯುವ ಸಂದರ್ಭದಲ್ಲಿ ದೇಗುಲಗಳ ನಗರವು ಜನರಿಂದ ತುಂಬಿ ತುಳುಕುತ್ತದೆ. ರಥಗಳ ಗಾಲಿಗಳು ಉರುಳುವಾಗ ಜನರು ಜಯಘೋಷ ಮೊಳಗಿಸುತ್ತಾ, ಮಂತ್ರಗಳನ್ನು ಪಠಿಸುತ್ತಾ, ಭಜನೆಗಳನ್ನು ಹಾಡುತ್ತಾ ಪಾಲ್ಗೊಳ್ಳುತ್ತಾರೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಬಾರಿಯ ರಥಯಾತ್ರೆಯಲ್ಲಿ ಸುಮಾರು 10 ಲಕ್ಷ ಜನರು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಅಭಿವೃದ್ಧಿ ಆಯುಕ್ತ ಪಿ.ಕೆ.ಜೆನಾ ಹೇಳಿದ್ದಾರೆ.
ಪೂರಿ ನಗರದ ಜಗನ್ನಾಥ ರಥಯಾತ್ರೆಯು ದೇಗುಲದಷ್ಟೇ ಹಳೆಯದು ಎಂದು ನಂಬಲಾಗಿದೆ. ರಥದ ಮೇಲೆ ಕೂಡಿಸುವ ದೇವರ ವಿಗ್ರಹಗಳನ್ನು ದೇಗುಲದಿಂದ ಹೊರಗೆ ತರಲಾಗುತ್ತದೆ. ಇಲ್ಲಿ ಬಳಕೆಯಾಗುವುದು ಮರದ ವಿಗ್ರಹಗಳು ಎನ್ನುವುದು ಮತ್ತೊಂದು ವಿಶೇಷ. ಪವಿತ್ರ ಸುದರ್ಶನ ಚಕ್ರದೊಂದಿಗೆ ವಿಗ್ರಹಗಳನ್ನು ದೇಗುಲದಿಂದ ಹೊರಗೆ ತರಲಾಗುತ್ತದೆ. ಒಂದು ವಾರಕ್ಕೂ ಹೆಚ್ಚು ದಿನಗಳು ದೇಗುಲದಿಂದ ಹೊರಗೇ ಇರುವ ವಿಗ್ರಹಗಳು ಮತ್ತೆ ದೇಗುಲಕ್ಕೆ ಹೋಗುವಾಗ ಮೌಸಿ ಮಾ (ಚಿಕ್ಕಮ್ಮ) ದೇವಾಲಯದಲ್ಲಿ ಸ್ವಲ್ಪ ಹೊತ್ತು ತಂಗುತ್ತವೆ. ಇಲ್ಲಿ ದೇವರಿಗೆ ಪಾರಂಪರಿಕ ‘ಪೊದ ಪೀಠ್’ (ಒಂದು ಬಗೆಯ ಸಿಹಿ ಪೊಂಗಲ್) ಸಮರ್ಪಿಸಲಾಗುತ್ತದೆ.
ಸಂಭಾವ್ಯ ಅಪಾಯಗಳನ್ನು ತಡೆಯಲೆಂದು ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ‘ರಥಯಾತ್ರೆ ಸಾಗಿಬರುವ ರಸ್ತೆ ಮತ್ತು ಸಮುದ್ರ ಕಿನಾರೆಯಲ್ಲಿ ಉತ್ತಮ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಡಿಜಿಪಿ ಸಂತೋಷ್ ಕುಮಾರ್ ಉಪಾಧ್ಯಾಯ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ರಥಯಾತ್ರೆಯ ಬಂದೋಬಸ್ತ್ಗಾಗಿ 180 ಪ್ಲಟೂಲ್ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 1,000ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
Published On - 8:11 am, Fri, 1 July 22