ತಮಿಳುನಾಡು ರಾಜ್ಯಕ್ಕೆ ರಘುರಾಮ್​ ರಾಜನ್, ಅರವಿಂದ್​ ಸುಬ್ರಹ್ಮಣಿಯನ್​​ ‘ಆರ್ಥಿಕ’ ಬಲ; ಸಲಹಾ ಮಂಡಳಿ ರಚನೆ

ರಘುರಾಮ್​ ರಾಜನ್ ಅವರು 2013ರಿಂದ 2016ರವರೆಗೆ ಆರ್​ಬಿಐನ ಗವರ್ನರ್​ ಆಗಿದ್ದರು. ಅದಕ್ಕೂ ಮೊದಲು ಇದ್ದ ಕಾಂಗ್ರೆಸ್​ ಸರ್ಕಾರದಲ್ಲಿ ಮನಮೋಹನ್​ ಸಿಂಗ್​ ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.

ತಮಿಳುನಾಡು ರಾಜ್ಯಕ್ಕೆ ರಘುರಾಮ್​ ರಾಜನ್, ಅರವಿಂದ್​ ಸುಬ್ರಹ್ಮಣಿಯನ್​​ ‘ಆರ್ಥಿಕ’ ಬಲ; ಸಲಹಾ ಮಂಡಳಿ ರಚನೆ
ರಘುರಾಮ್​ ರಾಜನ್​ ಮತ್ತು ಅರವಿಂದ್ ಸುಬ್ರಹ್ಮಣಿಯನ್

ತಮಿಳುನಾಡಿನ ರಾಜ್ಯ ಸರ್ಕಾರ ಮುಖ್ಯಮಂತ್ರಿ ಆರ್ಥಿಕ ಸಲಹಾ ಸಮಿತಿಯನ್ನು ರಚನೆ ಮಾಡಿದೆ. ಈ ಸಲಹಾ ಸಮಿತಿಯಲ್ಲಿ ನೋಬೆಲ್​ ಪ್ರಶಸ್ತಿ ಪುರಸ್ಕೃತೆ, ಮ್ಯಾಸಚೂಸೆಟ್ಸ್ ಇನ್​​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರೊಫೆಸರ್​ ಆಗಿರುವ ಎಸ್ತರ್​ ಡುಫ್ಲೋ, ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​, ಕೇಂದ್ರ ಸರ್ಕಾರದ ಮಾಜಿ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್​, ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ಮತ್ತು ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಸ್. ನಾರಾಯಣ್ ಇದ್ದಾರೆ. ರಾಜ್ಯವನ್ನು ಆರ್ಥಿಕವಾಗಿ ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್​ ನೇತೃತ್ವದ ಹೊಸ ವಿಧಾನಸಭೆ ರಚಿತವಾಗಿದೆ. ಇಂದು ಶಾಸನಸಭೆಯನ್ನು ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದ ರಾಜ್ಯಪಾಲ ಬನ್ವರಿಲಾಲ್​ ಪುರೋಹಿತ್, ಈ ಆರ್ಥಿಕ ಸಲಹಾ ಸಮಿತಿಯ ಬಗ್ಗೆ ತಿಳಿಸಿದ್ದಾರೆ. ಈ ಆರ್ಥಿಕ ಸಲಹಾ ಸಮಿತಿ ಶಿಫಾರಸು ಮಾಡಿದ ಕ್ರಮಗಳ ಅನ್ವಯ ರಾಜ್ಯದಲ್ಲಿ ಆರ್ಥಿಕ ಪುನರುಜ್ಜೀವನ ಮಾಡಲು ಸರ್ಕಾರ ಮುಂದಡಿ ಇಡುತ್ತದೆ. ಹಾಗೇ, ಆರ್ಥಿಕ ಅಭಿವೃದ್ಧಿಯ ಅನುಕೂಲಗಳು ಸಮಾಜದ ಎಲ್ಲ ವಿಭಾಗಗಳಿಗೂ ತಲುಪುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಈ ಸಲಹಾ ಸಮಿತಿಯಲ್ಲಿರುವ ಡುಫ್ಲೋ, ಫ್ರೆಂಚ್-ಅಮೇರಿಕನ್​ ಅರ್ಥಶಾಸ್ತ್ರಜ್ಞರಾಗಿದ್ದಾರೆ. ನೊಬೆಲ್​ ಪುರಸ್ಕೃತ ಅಭಿಜಿತ್​ ಬ್ಯಾನರ್ಜಿಯವರ ಪತ್ನಿಯಾದ ಡುಫ್ಲೋ, ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ಬಡತನ ನಿವಾರಣೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಬೋಧನೆ ಮಾಡುವ ಪ್ರಾಧ್ಯಾಪಕರು. 2003ರಲ್ಲಿ ಸ್ಥಾಪನೆಯಾದ ಅಬ್ದುಲ್ ಲತೀಫ್​ ಜಮೀಲ್ ಪವರ್ಟಿ ಆ್ಯಕ್ಷನ್​ ಲ್ಯಾಬ್​ನ ಸಹ ಸಂಸ್ಥಾಪಕಿ ಮತ್ತು ಸಹ ನಿರ್ದೇಶಕಿಯಾಗಿದ್ದಾರೆ.

ಇನ್ನು ರಘುರಾಮ್​ ರಾಜನ್ ಅವರು 2013ರಿಂದ 2016ರವರೆಗೆ ಆರ್​ಬಿಐನ ಗವರ್ನರ್​ ಆಗಿದ್ದರು. ಅದಕ್ಕೂ ಮೊದಲು ಇದ್ದ ಕಾಂಗ್ರೆಸ್​ ಸರ್ಕಾರದಲ್ಲಿ ಮನಮೋಹನ್​ ಸಿಂಗ್​ ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗೇ ಅರವಿಂದ್ ಸುಬ್ರಹ್ಮಣಿಯನ್ ಅವರು 2014ರಿಂದ 2018ರವರೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಜೀನ್ ಡ್ರೆಜ್ ಮತ್ತು ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಸ್. ನಾರಾಯಣ್ ಕೂಡ ಆರ್ಥಿಕತೆ ಅಧ್ಯಯನ, ವಿಶ್ಲೇಷಣೆಯಲ್ಲಿ ಪಳಗಿದವರು. ಹೀಗೆ ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಅಗ್ರಗಣ್ಯ ಆರ್ಥಿಕ ತಜ್ಞರನ್ನು ಒಳಗೊಂಡ ಆರ್ಥಿಕ ಸಲಹಾ ಸಮಿತಿಯನ್ನು ತಮಿಳುನಾಡು ಸರ್ಕಾರ ರಚಿಸಿದೆ.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಜನ್ಮದಿನಕ್ಕೆ ಕನ್ನಡದಲ್ಲೇ ಪತ್ರ ಬರೆದು ಹಾರೈಸಿದ ಪ್ರಧಾನಿ ಮೋದಿ

Raghuram Rajan Arvind Subramanian appointed to Tamil Nadu Govt Economic Advisory Council