ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮತ್ತೆ ರಾಹುಲ್ ಗಾಂಧಿ ಆಕ್ರೋಶ; ಜಾತಿ ಜನಗಣತಿಯ ಪ್ರತಿಜ್ಞೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಆರ್​ಎಸ್​ಎಸ್​ ಮತ್ತು ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಆಗ್ರಹಿಸಿದರು. "ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್" ರ್ಯಾಲಿಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಜಾತಿ ಜನಗಣತಿಯನ್ನು ಜಾರಿಗೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮತ್ತೆ ರಾಹುಲ್ ಗಾಂಧಿ ಆಕ್ರೋಶ; ಜಾತಿ ಜನಗಣತಿಯ ಪ್ರತಿಜ್ಞೆ
Rahul Gandhi In Madhya Pradesh

Updated on: Jan 27, 2025 | 4:31 PM

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಜನವರಿ 27) ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ- ಆರ್​ಎಸ್​ಎಸ್​ ಎರಡೂ ಬಿ.ಆರ್​ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನವನ್ನು ಅವಮಾನಿಸಿವೆ ಎಂದು ಆರೋಪಿಸಿದ್ದಾರೆ. ಅಧಿಕಾರದಲ್ಲಿರುವವರಿಂದ ಸಂವಿಧಾನವನ್ನು ರಕ್ಷಿಸುವಂತೆ ಪಕ್ಷದ ಕಾರ್ಯಕರ್ತರನ್ನು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಕಾಂಗ್ರೆಸ್ ದೇಶಾದ್ಯಂತ ಜಾತಿ ಜನಗಣತಿ ನಡೆಸಲಿದೆ ಎಂದು ಘೋಷಿಸಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಜಾತಿ ಜನಗಣತಿಯನ್ನು ಮಾಡಲಾರರು ಎಂದು ರಾಹುಲ್ ಟೀಕಿಸಿದ್ದಾರೆ.

ಇದನ್ನೂ ಓದಿ: ರಣದೀಪ್ ಸುರ್ಜೇವಾಲ ವಿರುದ್ಧವೇ ಸಿಡಿದ ಸಚಿವರು: ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ


ಕಾಂಗ್ರೆಸ್ ಶೇ. 50ರಷ್ಟು ಮೀಸಲಾತಿಯನ್ನು ಮುರಿದು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ ನಿಟ್ಟಿನಲ್ಲಿ ಕಾನೂನನ್ನು ತರುತ್ತದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ ಮತ್ತು ದೇಶದ ಸಂಪತ್ತನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಬಡವರನ್ನು ಮತ್ತೊಮ್ಮೆ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ-ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅದಕ್ಕಾಗಿಯೇ ಅವರು ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ “400 ಪಾರ್” ಎಂಬ ಘೋಷಣೆಯನ್ನು ನೀಡಿದರು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಅಧಿಕಾರವೇ ಇಲ್ಲ; ಪಾಟ್ನಾದಲ್ಲಿ ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಂತಾರಾಷ್ಟ್ರೀಯ ದರಗಳು ಕಡಿಮೆಯಾಗುತ್ತಿದ್ದರೂ ಪೆಟ್ರೋಲ್ ಬೆಲೆಗಳು ಏರುತ್ತಿರುವ ಬಗ್ಗೆ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಐಐಎಂ ಮತ್ತು ಐಐಟಿ ಪದವೀಧರರು ಕೂಡ ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದಾರೆ ಎಂದ ರಾಹುಲ್ ಗಾಂಧಿ ನಿರುದ್ಯೋಗವನ್ನು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ