
ನವದೆಹಲಿ, ನವೆಂಬರ್ 17: ನಿನ್ನೆಯಷ್ಟೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕತೆ ‘ಬಿಲಾಂಗಿಂಗ್’ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ತನ್ನ ತಾಯಿಯ ಹಳೆಯ ದಿನಗಳನ್ನು ಮೆಲುಕು ಹಾಕಿದ್ದ ರಾಹುಲ್ ಗಾಂಧಿಯವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. “ನಮ್ಮ ಮನೆಯಲ್ಲಿ ಪ್ರತಿ ದಿನ ಊಟ ಮಾಡುವಾಗಲೂ ನನ್ನ ತಾಯಿ ಸೋನಿಯಾ ಗಾಂಧಿ ನನ್ನ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ನಡುವೆ ಅಷ್ಟು ಆಪ್ತ ಸಂಬಂಧ ಮತ್ತು ಪ್ರೀತಿಯಿತ್ತು” ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಗೆ ವ್ಯಕ್ತವಾದ ಟೀಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಿರುಗೇಟು ನೀಡಿದ್ದಾರೆ.
“ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬೆಂಬಲಿಗರ ಸುತ್ತ ಬಲೆಯೊಂದನ್ನು ಹೆಣೆದಿದ್ದು, ಅದು ಅವರನ್ನು ಪ್ರೀತಿಯನ್ನು ಅನುಭವಿಸುವುದರಿಂದ ಮತ್ತು ವ್ಯಕ್ತಪಡಿಸುವುದರಿಂದ ತಡೆಯುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಿಂದೂ ಧರ್ಮದ ಕುರಿತಾದ ತಮ್ಮ ನಂಬಿಕೆಯನ್ನು ಉಲ್ಲೇಖಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಆ ಬಲೆಯಿಂದ ಅವರನ್ನು ಮುಕ್ತಗೊಳಿಸುವುದು ತಮ್ಮ ಕರ್ತವ್ಯವಾಗಿದ್ದು, ಆ ಮೂಲಕ ಅವರು ಪ್ರೀತಿ ಮತ್ತು ಬಿಲಾಂಗಿಂಗ್ ಆನಂದವನ್ನು ಅನುಭವಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?
ಇಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಹೃದಯದಲ್ಲಿ ಬಲೆಯೊಂದನ್ನು ಹೆಣೆದಿದ್ದು, ಅದು ಅವರನ್ನು ಪ್ರೀತಿಯನ್ನು ಅನುಭವಿಸುವುದರಿಂದ ಮತ್ತು ವ್ಯಕ್ತಪಡಿಸುವುದರಿಂದ ತಡೆಯುತ್ತಿದೆ. ಒಬ್ಬ ನಿಜವಾದ ಹಿಂದುವಾಗಿ, ಅವರನ್ನು ಈ ಬಲೆಯಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯವಾಗಿದೆ. ಆ ಮೂಲಕ ಅವರೂ ಸಹ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಸಂಬಂಧದ ಅಪೂರ್ವ ಆನಂದವನ್ನು ಅನುಭವಿಸಲು ಸಹಾಯಕವಾಗಬಹುದು” ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್ ಅನ್ನು “ಸತ್ಯಂ ಶಿವಂ ಸುಂದರಂ” ಎಂಬ ಸಾಲುಗಳೊಂದಿಗೆ ರಾಹುಲ್ ಮುಕ್ತಾಯಗೊಳಿಸಿದ್ದಾರೆ.
ತಮ್ಮ ಹೇಳಿಕೆಗೆ ಪೂರಕವಾಗಿ ರಾಹುಲ್ ಗಾಂಧಿ ಅವರು ಶಿವನ ಪವಿತ್ರ ವಾಹನವಾದ ನಂದಿಯ ಮೇಲೆ ಭಗವಾನ್ ಶಿವ ಮತ್ತು ಪಾರ್ವತಿ ದೇವಿ ಒಟ್ಟಿಗೆ ಆಸೀನರಾಗಿರುವ ಪ್ರಾಚೀನ ದೇವಾಲಯದ ಶಿಲ್ಪಕಲೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ನನ್ನ ಕುಟುಂಬದ ಕುರಿತ ಸುಳ್ಳು ಸಂಗತಿಗಳಿಂದ ನೋವಾಗಿತ್ತು’; ಆತ್ಮಕತೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ
ರಾಹುಲ್ ಗಾಂಧಿ ವಿವಾದಕ್ಕೀಡಾಗಿದ್ದೇಕೆ?:
“ನಾನು ಸಣ್ಣವನಿದ್ದಾಗ ಪ್ರತಿ ಊಟದ ಸಮಯದಲ್ಲೂ ಪಪ್ಪಾ ಇರುತ್ತಿದ್ದರು. ಆಗ ಅಪ್ಪನ ತೊಡೆಯ ಮೇಲೆ ಅಮ್ಮಾ ಕುಳಿತಿರುತ್ತಿದ್ದರು. ಅಪ್ಪನ ಮೈಮೇಲೆ ಕುಳಿತೇ ಅಮ್ಮ ಊಟ ಮಾಡುತ್ತಿದ್ದರು. ನಾನು ಚಿಕ್ಕವನಾಗಿದ್ದರಿಂದ ಇದು ಸಾಮಾನ್ಯ ವಿಷಯ, ಎಲ್ಲರ ಮನೆಯಲ್ಲೂ ಹೀಗೇ ಇರುತ್ತದೆ ಎಂದು ನಾನು ಭಾವಿಸಿದ್ದೆ. ಒಮ್ಮೆ ನನ್ನ ಗೆಳೆಯನ ಮನೆಗೆ ಹೋದಾಗ ಅವನ ಅಪ್ಪ-ಅಮ್ಮ ಬೇರೆ-ಬೇರೆಯಾಗಿ ಕುಳಿತು ಊಟ ಮಾಡುತ್ತಿದ್ದುದನ್ನು ನೋಡಿ ಗೊಂದಲಕ್ಕೀಡಾಗಿದ್ದ ನಾನು ನಿಮ್ಮ ತಾಯಿ ಏಕೆ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುವುದಿಲ್ಲ? ಎಂದು ಗೆಳೆಯನನ್ನು ಕೇಳಿದ್ದೆ. ನಮ್ಮ ಮನೆಯಲ್ಲಿ ಆ ದೃಶ್ಯ ಅಷ್ಟು ಸಹಜವಾಗಿ ದಿನವೂ ನಡೆಯುತ್ತಿದ್ದುದರಿಂದ ನಾನು ಎಲ್ಲರ ಮನೆಯಲ್ಲೂ ಹಾಗೇ ಇರುತ್ತದೆ ಎಂದು ಭಾವಿಸಿದ್ದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ