
ಪುಣೆ, ಸೆಪ್ಟೆಂಬರ್ 21: ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಸಾಮಾಜಿಕ ಜಾಲತಾಣದ ರೀಲ್ಸ್‌ನಲ್ಲಿ ಅಣಕಿಸಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಹೇಶ್ ಮೋಟೆ ಎಂಬುವವರನ್ನು ಎಂಎನ್‌ಎಸ್ ಕಾರ್ಯಕರ್ತರು ಹಿಡಿದು, ಮುಖಕ್ಕೆ ಮಸಿ ಬಳಿದು, ತಲೆಯ ಮೇಲೆ ಚಪ್ಪಲಿ ಇರಿಸಿ ಅವಮಾನಿಸಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ರಾಜ್ ಠಾಕ್ರೆ ಅವರ ಭಾವಚಿತ್ರದ ಮುಂದೆ ಬಲವಂತವಾಗಿ ಸಾಷ್ಟಾಂಗ ನಮಸ್ಕಾರ ಹಾಕಿಸಿ, ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸುವಂತೆ ಮಾಡಿದ ವಿಡಿಯೋವನ್ನು ಎಂಎನ್‌ಎಸ್ ಮುಖಂಡರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿವಾದಕ್ಕೆ ಕಾರಣವಾದ ರೀಲ್ಸ್: ಹಡಪ್ಸರ್ ವಿಧಾನಸಭಾ ಕ್ಷೇತ್ರದ ಎಂಎನ್‌ಎಸ್ ಉಪ-ವಿಭಾಗೀಯ ಅಧ್ಯಕ್ಷ ಶುಭಂ ಜಗದಾಳೆ ಪ್ರಕಾರ, ಮಹೇಶ್ ಮೋಟೆ ಸುಮಾರು 15 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ರಾಜ್ ಠಾಕ್ರೆ ಮತ್ತು ಪಕ್ಷದ ಮುಖಂಡರ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಭಾಷೆ ಬಳಸಿದ್ದರು.
ಕತ್ರಜ್ ಪಾರ್ಕ್‌ನಿಂದ ಎತ್ತಾಕಿದ ಕಾರ್ಯಕರ್ತರು: ವಿವಾದದ ಬೆನ್ನಲ್ಲೇ ಮಹೇಶ್ ಮೋಟೆ ಸುಮಾರು 20 ದಿನಗಳ ಕಾಲ ಕೇರಳದಲ್ಲಿದ್ದರು. ಅವರು ಪುಣೆಗೆ ಹಿಂತಿರುಗಿ ಕತ್ರಜ್ ಪ್ರದೇಶದ ಉದ್ಯಾನವನವೊಂದರಲ್ಲಿ ಇದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆಯೇ, ಎಂಎನ್‌ಎಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಅವರನ್ನು ಹಿಡಿದು ಪಕ್ಷದ ಸಾರ್ವಜನಿಕ ಸಂಪರ್ಕ ಕಚೇರಿಗೆ ಎಳೆತಂದಿದ್ದಾರೆ.
ಮುಖಕ್ಕೆ ಮಸಿ, ತಲೆಮೇಲೆ ಚಪ್ಪಲಿ: ಕಚೇರಿಯೊಳಗೆ ಮೋಟೆ ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿದೆ, ತಲೆಯ ಮೇಲೆ ಚಪ್ಪಲಿಗಳನ್ನು ಇಟ್ಟು ಕೂರಿಸಿ, ರಾಜ್ ಠಾಕ್ರೆ ಭಾವಚಿತ್ರಕ್ಕೆ ಕೈಮುಗಿದು ಬೇಷರತ್ ಕ್ಷಮೆ ಕೋರುವಂತೆ ಒತ್ತಾಯಿಸಲಾಗಿದೆ.
ಮತ್ತಷ್ಟು ಓದಿ: ‘ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ’; ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಆದಿತ್ಯ ಠಾಕ್ರೆ
ವಿಡಿಯೋದಲ್ಲಿ ಮಹೇಶ್ ಮೋಟೆ ಭಯದಿಂದ ನಡುಗುತ್ತಾ, ಕಣ್ಣೀರು ಸುರಿಸಿ ಕ್ಷಮೆಯಾಚಿಸುವುದು ಸೆರೆಯಾಗಿದೆ. ಈ ಘಟನೆಯನ್ನು ಸಮರ್ಥಿಸಿಕೊಂಡಿರುವ ಶುಭಂ ಜಗದಾಳೆ, “ಇದು ನಮ್ಮ ಎಂಎನ್‌ಎಸ್ ಸ್ಟೈಲ್ ನ್ಯಾಯ, ನಮ್ಮ ಭಾಷೆಯಲ್ಲೇ ‘ಮಹಾಪ್ರಸಾದ’ ನೀಡಿದ್ದೇವೆ. ರಾಜ್ ಸಾಹೇಬರ ವಿರುದ್ಧ ಯಾರು ಮಾತನಾಡಿದರೂ ಇದೇ ಗತಿ” ಎಂದು ಎಚ್ಚರಿಸಿದ್ದಾರೆ.
ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಆರಂಭದಿಂದಲೂ ತನ್ನ ಆಕ್ರಮಣಕಾರಿ ಹಾಗೂ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕುಖ್ಯಾತಿ ಪಡೆದಿದೆ. ಹಿಂದಿ ಭಾಷಿಕರ ಮೇಲಿನ ಹಲ್ಲೆ, ಟೋಲ್ ಪ್ಲಾಜಾಗಳ ಧ್ವಂಸ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದವರ ಮೇಲೆ ಹಲ್ಲೆ ನಡೆಸಿ ಕ್ಷಮೆ ಕೇಳಿಸುವುದು ಈ ಪಕ್ಷದ ಚಾಳಿಯಾಗಿದೆ.
🚨Shocking gundagardi by MNS in Pune. Social media influencer humiliated, face blackened, slippers placed on head and later made to bow before Raj Thackeray’s photo.
The social media influencer allegedly made obscene and personal remarks about Raj Thackeray that irked MNS… pic.twitter.com/isfGYtiEYu
— Karan Singh / करन सिंह (@Journo_Karan) September 21, 2026
ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರನ್ನು ಅಣಕಿಸಿ ವಿಡಿಯೋ ಮಾಡುವ ಹಾಸ್ಯನಟರು, ಯೂಟ್ಯೂಬರ್‌ಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ಶಿವಸೇನೆ ಅಥವಾ ಎಂಎನ್‌ಎಸ್‌ನಂತಹ ಪ್ರಾದೇಶಿಕ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸಿ ವಿಡಿಯೋ ವೈರಲ್ ಮಾಡುತ್ತಿರುವುದು ವಾಕ್ ಸ್ವಾತಂತ್ರ್ಯದ ದೃಷ್ಟಿಯಿಂದ ಪದೇ ಪದೇ ಆತಂಕಕ್ಕೆ ಕಾರಣವಾಗುತ್ತಿದೆ.
ಪೊಲೀಸ್ ತನಿಖೆಯ ನಿರೀಕ್ಷೆ: ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಕೂಡಿಹಾಕಿ, ಮುಖಕ್ಕೆ ಮಸಿ ಬಳಿದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿರುವ ಈ ಕೃತ್ಯದ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತಾರೆಯೇ ಅಥವಾ ಸಂತ್ರಸ್ತ ವ್ಯಕ್ತಿ ದೂರು ನೀಡುತ್ತಾರೆಯೇ ಎಂಬುದರ ಮೇಲೆ ಮುಂದಿನ ಕಾನೂನು ಕ್ರಮ ಅವಲಂಬಿತವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ