ಮುಂದುವರಿಯಲಿದೆ ಮಸೀದಿಗಳ ಎದುರು ಹನುಮಾನ್ ಚಾಲೀಸಾ ಅಭಿಯಾನ: ರಾಜ್ ಠಾಕ್ರೆ

ಮುಂದುವರಿಯಲಿದೆ ಮಸೀದಿಗಳ ಎದುರು ಹನುಮಾನ್ ಚಾಲೀಸಾ ಅಭಿಯಾನ: ರಾಜ್ ಠಾಕ್ರೆ
ರಾಜ್ ಠಾಕ್ರೆ

ಮಸೀದಿಗಳ ಎದುರು ಹನುಮಾನ್ ಚಾಲೀಸಾ ಪ್ಲೇ ಮಾಡುವುದು ಒಂದು ದಿನದ ಅಭಿಯಾನವಲ್ಲ. ಸರ್ಕಾರ ಈ ವಿಚಾರವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಅಭಿಯಾನ ಮುಂದುವರಿಯಲಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಘೋಷಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 04, 2022 | 2:30 PM

ಮುಂಬೈ: ಮಸೀದಿಗಳ ಎದುರು ಹನುಮಾನ್ ಚಾಲೀಸಾ ಪ್ಲೇ ಮಾಡುವುದು ಒಂದು ದಿನದ ಅಭಿಯಾನವಲ್ಲ. ಸರ್ಕಾರ ಈ ವಿಚಾರವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಅಭಿಯಾನ ಮುಂದುವರಿಯಲಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಘೋಷಿಸಿದರು. ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಸರ್ಕಾರ ಸಂಪೂರ್ಣವಾಗಿ ಪಾಲಿಸಬೇಕು. ಇದನ್ನು ಧಾರ್ಮಿಕ ವಿಚಾರವಾಗಿ ಪರಿಗಣಿಸದೇ, ಸಾಮಾಜಿಕ ವಿಷಯವಾಗಿ ಪರಿಗಣಿಸಬೇಕು. ಈ ಅಂಶವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ನಾವು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನನಗೆ ತಿಳಿದಿರುವಂತೆ ಮುಂಬೈನಲ್ಲಿ 1,500 ಮಸೀದಿಗಳಿವೆ. ಈ ಪೈಕಿ 135 ಮಸೀದಿಗಳು ಬೆಳಿಗ್ಗೆ 5 ಗಂಟೆಗೆ ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಿ ಆಜಾನ್ ಕೂಗುತ್ತಿವೆ. ಈ ಮಸೀದಿಗಳ ವಿರುದ್ಧ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸುತ್ತೇನೆ. ಕೇವಲ ನಮ್ಮ ಕಾರ್ಯಕರ್ತರ ವಿರುದ್ಧ ಮಾತ್ರ ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ ಎಂದು ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ವಿವರಿಸಿದರು.

ಸರ್ಕಾರಿ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ನಾವು ಮಾಡಿದೆವು ಎನ್ನುವ ಕಾರಣಕ್ಕೆ ಮುಂಬೈ ನಗರವೊಂದರಲ್ಲಿಯೇ ಸುಮಾರು 140 ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ನಾನಾಗಲಿ, ನಮ್ಮ ಪಕ್ಷವಾಗಲಿ ಕಾನೂನುಬದ್ಧವಾಗಿ ಬಳಕೆ ಮಾಡುವ ಧ್ವನಿವರ್ಧಕಗಳನ್ನು ವಿರೋಧಿಸುತ್ತಿಲ್ಲ. ದೇಗುಲಗಳಲ್ಲಿ ಬಳಕೆಯಾಗುತ್ತಿರುವ ಅಕ್ರಮ ಧ್ವನಿವರ್ಧಕಗಳ ಬಗ್ಗೆಯೂ ನಮಗೆ ತಕರಾರು ಇದೆ. ಅವುಗಳನ್ನು ತೆರವುಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಧ್ವನಿವರ್ಧಕಗಳಲ್ಲಿ ಶಬ್ದವು 45ರಿಂದ 55 ಡೆಸಿಬಲ್​ಗಿಂತಲೂ ಹೆಚ್ಚಾಗಬಾರದು. ಇದು ಹೆಚ್ಚು ಕಡಿಮೆ ನಮ್ಮ ಅಡುಗೆ ಮನೆಗಳಲ್ಲಿರುವ ಮಿಕ್ಸಿ ಹೊಮ್ಮಿಸುವ ಧ್ವನಿಯಷ್ಟೇ ಆಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Raj Thackeray ನಾಳೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗಿದರೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸಿ: ರಾಜ್ ಠಾಕ್ರೆ ಕರೆ

ಇದನ್ನೂ ಓದಿ: ಹನುಮಾನ್ ಚಾಲೀಸಾ ವಿವಾದ : ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್‌ನಲ್ಲಿ ಪ್ರಕರಣ ದಾಖಲು

Follow us on

Most Read Stories

Click on your DTH Provider to Add TV9 Kannada