ಚೀನಾ ಮತ್ತು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ..
LACಯಲ್ಲಿ ಚೀನಾ ಮತ್ತು LOCಯಲ್ಲಿ ಪಾಕಿಸ್ತಾನ ಪದೇಪದೆ ಭಾರತದ ತಂಟೆಗೆ ಬರುತ್ತಿದೆ. ಇವೆರಡೂ ದೇಶಗಳ ಉಪಟಳ ಗಡಿಯಲ್ಲಿ ಹೆಚ್ಚಾದ ಬೆನ್ನಲ್ಲೇ ರಾಜನಾಥ್ ಸಿಂಗ್ ಈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್: ಗಡಿಗಳಲ್ಲಿ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ನೆರೆರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರದ ಗೌರವದ ವಿಚಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿಂಚಿತ್ತೂ ರಾಜಿಯಾಗುವುದಿಲ್ಲ. ನಾವು ಶಾಂತಿಯನ್ನು ಬಯಸುತ್ತೇವೆಯೇ ಹೊರತು, ಸಂಘರ್ಷವನ್ನಲ್ಲ. ಆದರೆ ಯಾವುದೇ ಸನ್ನಿವೇಶ ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಹೈದರಾಬಾದ್ ದುಂಡಿಗಲ್ನಲ್ಲಿರುವ ಏರ್ಫೋರ್ಸ್ ಅಕಾಡೆಮಿಯಲ್ಲಿ ನಡೆದ ಸಂಯೋಜಿತ ಪದವಿ ಪರೇಡ್ (Combined Graduation Parade)ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಚೀನಾ ಮತ್ತು ಪಾಕಿಸ್ತಾನವನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ಪಶ್ಚಿಮದಲ್ಲಿ ನೆರೆರಾಷ್ಟ್ರ ಪಾಕಿಸ್ತಾನ ಗಡಿಯಲ್ಲಿ ದುಷ್ಟ ವರ್ತನೆ ತೋರಿಸುತ್ತಿದೆ. 4 ಯುದ್ಧಗಳನ್ನು ಸೋತರೂ ಇನ್ನೂ ಉಗ್ರರ ಮೂಲಕ, ಹೀನಾಯ ಹೋರಾಟ ನಡೆಸುತ್ತಲೇ ಇದೆ. ಆದರೆ ಇವರ ಕುಕೃತ್ಯವನ್ನೆಲ್ಲ ಯಶಸ್ವಿಯಾಗಿ ವಿಫಲಗೊಳಿಸುತ್ತಿರುವ ನಮ್ಮ ಭದ್ರತಾ ಪಡೆಯನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದರು.
LAC (ವಾಸ್ತವಿಕ ಗಡಿ ನಿಯಂತ್ರಣ ರೇಖೆ) ಯಲ್ಲಿ ಚೀನಾ ಮತ್ತು LOC (ಗಡಿ ನಿಯಂತ್ರಣಾ ರೇಖೆ)ಯಲ್ಲಿ ಪಾಕಿಸ್ತಾನ ಪದೇಪದೆ ಭಾರತದ ತಂಟೆಗೆ ಬರುತ್ತಿದೆ. ಇವೆರಡೂ ದೇಶಗಳ ಉಪಟಳ ಗಡಿಯಲ್ಲಿ ಹೆಚ್ಚಾದ ಬೆನ್ನಲ್ಲೇ ರಾಜನಾಥ್ ಸಿಂಗ್ ಈ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಮಿಲಿಟರಿ ಲಿಟರೇಚರ್ ಫೆಸ್ಟಿವಲ್-2020ನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಅವರು, ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೆ ಎದುರಾಗುವ ಅಪಾಯದ ಸ್ವರೂಪ ಬದಲಾಗಲಿದೆ ಎಂದಿದ್ದರು.
ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ‘ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’