ಹಾರುವ ದೋಸೆ ನಂತರ ವೈರಲ್ ಆಯ್ತು ರಜನಿಕಾಂತ್ ಸ್ಟೈಲ್ ದೋಸೆ
Viral Video: ಮುಂಬೈನ ದಾದರ್ ಪ್ರದೇಶದಲ್ಲಿರುವ ಖ್ಯಾತ ಫುಡ್ ಸ್ಟಾಲ್ 'ಮುತ್ತು ದೋಸಾ ಕಾರ್ನರ್'ನಲ್ಲಿ ಮಾಡುವ ರಜನಿಕಾಂತ್ ಸ್ಟೈಲ್ ದೋಸೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮುಂಬೈ: ದೋಸೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ವೈರಟಿ ದೋಸೆ ಎಂದಾಗ ಬೀದಿ ಬದಿಯಲ್ಲಿ ತಳ್ಳು ಗಾಡಿಯಲ್ಲಿ ಮಾಡುವ ಬಿಸಿಬಿಸಿ ದೋಸೆ ಕಣ್ಣುಮುಂದೆ ಬರುತ್ತವೆ. ಕಾದ ಕಾವಲಿ ಮೇಲೆ ನೀರು ಚಿಮುಕಿಸಿ ಅದನ್ನು ಒರೆಸಿದ ನಂತರ ದೋಸೆ ಹುಯ್ಯುವ ರೀತಿಯೇ ಚಂದ. ಅದರಲ್ಲೂ ಮಹಾನಗರಗಳಲ್ಲಿ ಸಿಗುವ ಬೀದಿ ಬದಿಯ ದೋಸೆಗಳು ಹಲವಾರು ಪರಿಷ್ಕರಣೆಗೊಳಗಾಗಿರುತ್ತವೆ. ಇತ್ತೀಚೆಗೆ ಮುಂಬೈ ಬೀದಿಬದಿಯಲ್ಲಿರುವ ಸ್ಟಾಲ್ ಒಂದರಲ್ಲಿ ರಜನಿಕಾಂತ್ ಸ್ಟೈಲ್ ದೋಸೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮುಂಬೈನ ದಾದರ್ ಪ್ರದೇಶದಲ್ಲಿರುವ ಖ್ಯಾತ ಫುಡ್ ಸ್ಟಾಲ್ ‘ಮುತ್ತು ದೋಸಾ ಕಾರ್ನರ್’ನಲ್ಲಿ ರಜನಿಕಾಂತ್ ಸ್ಟೈಲ್ ದೋಸೆ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮಸಾಲೆ ದೋಸೆ, ಮೈಸೂರು ಮಸಾಲೆ ದೋಸೆ ಈ ಸ್ಟಾಲ್ನ ವಿಶೇಷ. ಈ ಸ್ಟಾಲ್ನ ಮಾಲೀಕ ದೋಸೆ ಹಿಟ್ಟು ಕಾವಲಿ ಮೇಲೆ ಎರೆದು ಅದಕ್ಕೆ ಬೆಣ್ಣೆ ಸವರಿ ದೋಸೆ ಮಧ್ಯಭಾಗದಲ್ಲಿ ಮಸಾಲೆ ತುಂಬಿಸಿ ಅದನ್ನು ಮಡಚಿ, ಸಟ್ಟುಗದಿಂದ ದೋಸೆಯನ್ನು ಕತ್ತರಿಸಿ ಅದನ್ನು ಪ್ಲೇಟ್ ಮೇಲೆ ಇಟ್ಟು ಆ ಪ್ಲೇಟನ್ನು ಇನ್ನೊಂದು ಬದಿಗೆ ದಾಟಿಸುವ ರೀತಿಯೇ ರಜನಿಕಾಂತ್ ಸ್ಟೈಲ್ ಎಂದು ಹೆಸರುಗಳಿಸಿಕೊಂಡಿದೆ. ದೋಸೆ ಮಾಡುವ ವೇಗ ಮತ್ತು ಅದನ್ನು ತಟ್ಟೆಯಲ್ಲಿರಿಸಿ ಕೊಡುವ ಈ ರೀತಿಗೆ ಮುಂಬೈ ಜನರು ಫಿದಾ ಆಗಿದ್ದಾರೆ.
ಈ ಹಿಂದೆ ಮುಂಬೈಯ ಕಲ್ಬಾದೇವಿ ಪ್ರದೇಶದಲ್ಲಿರುವ ಶ್ರೀ ಬಾಲಾಜಿ ದೋಸಾ ಫ್ಯಾಕ್ಟರಿಯಲ್ಲಿನ ಹಾರುವ ದೋಸೆ ವೈರಲ್ ಆಗಿತ್ತು. ದೋಸೆ ಮಾಡುವ ಕಾವಲಿಯಿಂದ ಬಾಣಸಿಗ ಆ ದೋಸೆಯನ್ನು ಎತ್ತಿ ಹಾರಿಸಿ ಅದು ಪ್ಲೇಟ್ಗೆ ಬೀಳುವಂತೆ ಮಾಡುತ್ತಿರುವ ದೃಶ್ಯ ಅದಾಗಿತ್ತು.
ಇದನ್ನೂ ಓದಿ: ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್