Ramanuja Sahasrabdi: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ; ಮೂರನೇ ದಿನದ ಕಾರ್ಯಕ್ರಮ ಸಂಪನ್ನ
ತೆಲಂಗಾಣದ ಚಿನ್ನ ಜೀಯರ್ ಸ್ವಾಮಿ ಆಶ್ರಮದ ಸಮೀಪದಲ್ಲಿ ಇರುವ ಶ್ರೀರಾಮಾನುಜಾಚಾರ್ಯರ ಪ್ರತಿಮೆಯು ಶೀಘ್ರವೇ ರಾಜ್ಯದ ಪ್ರಮುಖ ಪ್ರವಾಸಿ ತಾಣ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಹೈದರಾಬಾದ್: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿಯ ಮೂರನೇ ದಿನದ ಕಾರ್ಯಕ್ರಮಗಳು ಇಂದು (ಫೆಬ್ರವರಿ 4) ಹೈದರಾಬಾದ್ನ ಹೊರವಲಯದ ಮುಂಚಿತ್ತಾಲ್ನಲ್ಲಿ ನಡೆಯಿತು. ಅಷ್ಟಾಕ್ಷರಿ ಮಂತ್ರ ಪಠಿಸುವ ಮೂಲಕ ಆಚರಣೆಗಳನ್ನು ಆರಂಭಿಸಲಾಯಿತು. ಈ ಮಂತ್ರಪಠಣ ಕಾರ್ಯಕ್ರಮವು ಫೆಬ್ರವರಿ 14ರ ವರೆಗೆ, ಐದು ಸಾವಿರಕ್ಕೂ ಅಧಿಕ ಋತ್ವಿಕರ ಸಮ್ಮುಖದಲ್ಲಿ ನಡೆಯಲಿದೆ. ಇಂದಿನ ಸಮಾರಂಭಕ್ಕೆ ನಗರದ ವಿವಿಧ ಭಾಗಗಳ ಜನರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ತಮ್ಮ ಪತ್ನಿ ಶೋಭಾ ಸಹಿತರಾಗಿ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಚಿನ್ನ ಜೀಯರ್ ಸ್ವಾಮಿ ಆಶ್ರಮದ ಸಮೀಪದಲ್ಲಿ ಇರುವ ಶ್ರೀರಾಮಾನುಜಾಚಾರ್ಯರ ಪ್ರತಿಮೆಯು ಶೀಘ್ರವೇ ರಾಜ್ಯದ ಪ್ರಮುಖ ಪ್ರವಾಸಿ ತಾಣ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ರಾಮಾನುಜಾಚಾರ್ಯರು ಸಮಾನತೆ, ಗೌರವ ಹಾಗೂ ಶಾಂತಿಯನ್ನು ಸುಮಾರು ಸಾವಿರ ವರ್ಷಗಳ ಹಿಂದೆ ಬೋಧಿಸಿದರು ಎಂದು ಹೇಳಿದರು.
ಮುಂಚಿತ್ತಾಲ್ ಸಮಾನತೆಯ ಮೂರ್ತಿ ಕಾರಣದಿಂದ ಪ್ರಾಮುಖ್ಯತೆ ಪಡೆಯಲಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಹಾಗೂ ಆಶ್ರಮದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಕೆಸಿಆರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ಸ್ಥಳದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮಹಾಯಜ್ಞ ನಡೆಯುತ್ತಿದೆ. 1.5 ಲಕ್ಷ ಲೀಟರ್ನಷ್ಟು ಹಸುವಿನ ಶುದ್ಧ ತುಪ್ಪದಿಂದ ಯಾಗ ನಡೆಸಲಾಗುತ್ತಿದೆ. ಈ ಯಾಗವು ಕೊವಿಡ್19 ಮಾತ್ರವಲ್ಲದೆ ಇತರ ವೈರಸ್ಗಳಾದ ಅಸಮಾನತೆ, ದ್ವೇಷಗಳಿಂದ ನಮ್ಮನ್ನು ಹೊರತರಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ನಾಲ್ಕನೇ ದಿನವಾದ ನಾಳೆ (ಫೆಬ್ರವರಿ 5) ಅನುಷ್ಠಾನಮ್ ಮಂತ್ರ ಪಠಿಸಲಾಗುವುದು. ಅದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಸಮಾಜದ ಒಳಿತನ್ನು ಬಯಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Statue of Equality: ಹೈದರಾಬಾದ್ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟನೆಗೆ ಸಕಲ ಸಿದ್ಧತೆ
ಇದನ್ನೂ ಓದಿ: ಫೆ. 5ರಂದು ಹೈದರಾಬಾದ್ಗೆ ಪ್ರಧಾನಿ ಮೋದಿ ಭೇಟಿ; ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಅನಾವರಣ
Published On - 9:07 pm, Fri, 4 February 22