Ramanujacharya Sahasrabdi: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿಯ ಮೊದಲ ದಿನದ ಕಾರ್ಯಕ್ರಮ ಸಂಪನ್ನ
ರಾಮಾನುಜರ ಘೋಷಣೆಗಳೊಂದಿಗೆ ಭಾಗ್ವತ್ 2 ಕಿಲೋ ಮೀಟರ್ ನಡೆದಿದ್ದಾರೆ. ಋತ್ವಿಕರು ಹಾಗೂ ಪುರೋಹಿತರು ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಕೋಲಾಟ, ಕೂಚುಪುಡಿ ನೃತ್ಯದೊಂದಿಗೆ ಮೆರವಣಿಗೆ ಸಾಗಿದೆ.
ಹೈದರಾಬಾದ್: ಶ್ರೀರಾಮಾನುಜಾಚಾರ್ಯರ ಜನ್ಮೋತ್ಸವ ಸಹಸ್ರಾಬ್ದಿಯ ಮೊದಲ ದಿನದ ಕಾರ್ಯಕ್ರಮ ಇಂದು (ಫೆಬ್ರವರಿ 2) ನಡೆದಿದೆ. ಇಲ್ಲಿನ ರಂಗರೆಡ್ಡಿ ಜಿಲ್ಲೆಯ ಮುಚ್ಚಿಂತಾಲ್ನ ಶ್ರೀರಾಮನಗರಮ್ನಲ್ಲಿ ಕಾರ್ಯಕ್ರಮ ನಡೆಯಿತು. ಪೆರುಮಲ್ಲಸ್ವಾಮಿಯ ಶೋಭಯಾತ್ರೆಯು ದಿವ್ಯಸಾಕೇತಮ್ನಿಂದ ಮೊದಲು ಆರಂಭಗೊಂಡಿದೆ. ಅಹೋಬಲ ರಾಮಾನುಜ ಜೀಯರ್ ಸ್ವಾಮಿ, ದೇವನಾಥ ರಾಮಾನುಜ ಜೀಯರ್ ಸ್ವಾಮಿ, ರಾಮಚಂದ್ರ ರಾಮಾನುಜ ಜೀಯರ್ ಸ್ವಾಮಿ, ಅಷ್ಟಾಕ್ಷರಿ ರಾಮಾನುಜ ಜೀಯರ್ ಸ್ವಾಮಿ ಹಾಗೂ ವ್ರತಧರ ರಾಮಾನುಜ ಜೀಯರ್ ಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಆರಂಭಗೊಂಡಿದೆ.
ರಾಮಾನುಜರ ಘೋಷಣೆಗಳೊಂದಿಗೆ ಭಾಗವತರು 2 ಕಿಲೋ ಮೀಟರ್ ನಡೆದಿದ್ದಾರೆ. ಋತ್ವಿಕರು ಹಾಗೂ ಪುರೋಹಿತರು ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಕೋಲಾಟ, ಕೂಚುಪುಡಿ ನೃತ್ಯದೊಂದಿಗೆ ಮೆರವಣಿಗೆ ಸಾಗಿದೆ. ಇದಕ್ಕೂ ಮೊದಲು ಯಾಗಶಾಲೆಯಲ್ಲಿ ಪೆರುಮಲ್ಲ ದೇವರಿಗೆ ವಿಶೇಷ ಪೂಜೆ ನಡೆಸಲಾಗಿದೆ. ಈ ವೇಳೆ ಸ್ವಾಮೀಜಿಗಳು ಆಶೀರ್ವಚನ ನೀಡಿದ್ದಾರೆ. ಈ ಪೂಜಾ ಕಾರ್ಯಕ್ರಮದಲ್ಲಿ ಮೈಹೋಮ್ ಗ್ರೂಪ್ನ ರಾಮೇಶ್ವರ್ ರಾವ್ ಕೂಡ ಪಾಲ್ಗೊಂಡಿದ್ದಾರೆ.
ಶ್ರೀರಾಮಾನುಜಾಚಾರ್ಯರ 1000ನೇ ಸಹಸ್ರಾಬ್ಧಿ ಸಮಾರೋಹಮ್ನ್ನು ಇಲ್ಲಿನ ಮುಂಚಿತಾಲ್ ಶಮ್ಶಾಬಾದ್ನಲ್ಲಿ ಆಚರಿಸಲಾಗುತ್ತಿದೆ. ಈ ವೇಳೆ, ಸಮಾನತೆಯ ಮೂರ್ತಿ (Statue of Equality) ಇರುವ 45 ಎಕರೆ ಪ್ರದೇಶದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಮಹಾ ಯಜ್ಞ ನಡೆಸಲಾಗಿದೆ. ಸುಮಾರು 5,000 ವೇದ ಪಂಡಿತರು, 1,035 ಯಾಗ ಕುಂಡದಲ್ಲಿ, 144 ಯಾಗಶಾಲೆಯಲ್ಲಿ ಈ ಮಹಾಯಾಗವನ್ನು ನಡೆಸಿಕೊಟ್ಟಿದ್ದಾರೆ. ಆಧುನಿಕ ಇತಿಹಾಸದಲ್ಲಿ ಇದು ಜಗತ್ತಿನ ಬೃಹತ್ ಯಾಗ ಎಂದು ಪರಿಗಣಿಸಬಹುದಾಗಿದೆ. ಈ ಮಹಾಯಜ್ಞವು ಮುಂದಿನ 14 ದಿನಗಳವರೆಗೆ ನಡೆಯಲಿದೆ. ಚಿನ್ನ ಜೀಯರ್ ಸ್ವಾಮೀಜಿ ಮಹಾಯಜ್ಞದಲ್ಲಿ ಭಾಗಿ ಆಗಿದ್ದಾರೆ.
ಎಲ್ಲಕ್ಕೂ ಮೊದಲು ವಿಶ್ವಕ್ಸೇನ ಪೂಜೆ, ವಾಸ್ತು ಪೂಜೆ ನಡೆಸಲಾಗಿದೆ. ವಾಸ್ತುಹೋಮ ಮಾಡಲಾಗಿದೆ. ಬಳಿಕ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಹಾಗೂ ಸಣ್ಣ ಜೀಯರ್ ಸ್ವಾಮಿ ವಾಸ್ತುಶಾಂತಿಯ ಪ್ರಾಮುಖ್ಯತೆ ತಿಳಿಸಿಕೊಟ್ಟಿದ್ದಾರೆ. ನಾಳೆಯ ಕಾರ್ಯಕ್ರಮದ ಅಂಗವಾಗಿ ಅರಣಿ ಮಥನ, ಅಗ್ನಿ ಪ್ರತಿಷ್ಠೆ, ಸುದರ್ಶನೇಷ್ಟಿ, ವಾಸುದೇವನೇಷ್ಟಿ ಹಾಗೂ ಶ್ರೀಪೆದ್ದ ಜೀಯರ್ ಸ್ವಾಮಿ ಯಾಗಶಾಲೆಯಲ್ಲಿ ಪೂಜೆ ನಡೆಸಲಿದ್ದಾರೆ.
ಶೋಭಯಾತ್ರೆಯ ವಿಶೇಷತೆಗಳು
ಶೋಭಯಾತ್ರೆಯಲ್ಲಿ 3,000ಕ್ಕೂ ಅಧಿಕ ಮಂದಿ ಭಾಗವಹಿಸಿದರು. ಸಂತರು, ಪುರೋಹಿತರು, ನೃತ್ಯಗಾರರು, ಸಂಗೀತಗಾರರು ಹಾಗೂ ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಅತಿಥಿಗಳು ಮೆರವಣಿಗೆಯ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ಯುವಜನರು ಭಾಗವಹಿಸಿದರು. ಅವರೆಲ್ಲರೂ ತಮಗೆ ವಿಧಿಸಿದ್ದ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸಿದರು. ಅವರೆಲ್ಲರೂ ಧಾರ್ಮಿಕ ಶಕ್ತಿಯಿಂದ ಉಲ್ಲಸಿತರಾಗಿದ್ದರು ಎಂದು ಹೇಳಿದ್ದಾರೆ.
ಇಂತಹ ಮಹತ್ಕಾರ್ಯದ ವೇಳೆ ಆಗಮಿಸಿದ ಜನರಿಗೆ ಸತ್ಕಾರ ಕಡಿಮೆ ಆಗಬಾರದು ಎಂದು ಅದಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ. ಸ್ಥಳದಲ್ಲಿ ಸುಮಾರು 10,000 ಸುರಕ್ಷತಾ ಸಿಬ್ಬಂದಿಗಳು 2 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ವೈದ್ಯಕೀಯ ಅವಶ್ಯಕತೆಗಳಿಗೆ ಯಶೋಧಾ ಆಸ್ಪತ್ರೆಯು ಸ್ಥಳದಲ್ಲಿ ಟೆಂಟ್ ಹಾಗೂ ವೈದ್ಯಕೀಯ ಸವಲತ್ತುಗಳನ್ನು ನೀಡಿದೆ. ಅತಿಥಿಗಳಿಗೆ ಅನುಕೂಲ ಆಗಲು ಸುಮಾರು 15,000 ಸ್ವಯಂಸೇವಕರು ಇದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೇಪಾಳದ ಅತಿಥಿ ಒಬ್ಬರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಣ್ಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯದ ಸಾಂಸ್ಕೃತಿಕ ನೃತ್ಯವನ್ನು ಕೂಡ ಪ್ರದರ್ಶಿಸಲಾಗಿತ್ತು.
ಇದನ್ನೂ ಓದಿ: Ramanujacharya Sahasrabdi: 5000 ವೇದಪಂಡಿತರು, 1035 ಯಾಗಕುಂಡದಲ್ಲಿ ಲಕ್ಷ್ಮೀನಾರಾಯಣ ಮಹಾಯಜ್ಞ ಆರಂಭ
ಇದನ್ನೂ ಓದಿ: Ramanujacharya Statue: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭಕ್ಕೆ ಭರದ ಸಿದ್ಧತೆ
Published On - 8:57 pm, Wed, 2 February 22