Ramayana: ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮುಸ್ಲಿಂ ವಿದ್ಯಾರ್ಥಿಗಳು
ಆನ್‌ಲೈನ್‌ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಕೇರಳದ 8 ವರ್ಷದ ವಾಫಿ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಜಬೀರ್ ಪಿ.ಕೆ ಮತ್ತು ಅದೇ ಕೋರ್ಸ್‌ನ ಐದನೇ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಬಸಿತ್ ವಿಜೇತರಾಗಿದ್ದಾರೆ.
ಮಲಪ್ಪುರಂ: ಕೇರಳದ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ರಾಮಾಯಣಕ್ಕೆ (Ramayana) ಸಂಬಂಧಿಸಿದ ರಸಪ್ರಶ್ನೆಯಲ್ಲಿ ವಿಜೇತರಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ವಲಂಚೇರಿಯ ಕೆಕೆಎಚ್‌ಎಂ ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನ ಇಬ್ಬರು ಇಸ್ಲಾಮಿಕ್ ಸ್ಟಡೀಸ್ ವಿದ್ಯಾರ್ಥಿಗಳು ರಾಮಾಯಣದ ರಾಜ್ಯಮಟ್ಟದ ರಸಪ್ರಶ್ನೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಆನ್‌ಲೈನ್‌ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ 8 ವರ್ಷದ ವಾಫಿ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಜಬೀರ್ ಪಿ.ಕೆ ಮತ್ತು ಅದೇ ಕೋರ್ಸ್‌ನ ಐದನೇ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಬಸಿತ್ ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಐವರ ಪೈಕಿ ಇವರೂ ಸೇರಿದ್ದಾರೆ.
ಈ ರಾಮಾಯಣ ರಸಪ್ರಶ್ನೆಯಲ್ಲಿ ಅಭಿರಾಮ್ ಎಂ.ಪಿ, ನೀತು ಕೃಷ್ಣನ್ ಮತ್ತು ನವನೀತ್ ಗೋಪನ್ ಕೂಡ ವಿಜೇತರಾಗಿದ್ದಾರೆ. “ಜನರು ಇತರ ಧರ್ಮಗಳ ಸಾಹಿತ್ಯವನ್ನು ಓದಲು ಹಿಂಜರಿಯಬಾರದು” ಎಂದು ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿ ಮೊಹಮ್ಮದ್ ಜಬೀರ್ ಹೇಳಿದ್ದಾರೆ. ನಾವು ಎಲ್ಲಾ ಧರ್ಮಗಳನ್ನು ಅವರ ಧಾರ್ಮಿಕ ಪಠ್ಯಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾವು ಹೆಚ್ಚು ಇಷ್ಟಪಡುವುದನ್ನು ನಾವು ಅಭ್ಯಾಸ ಮಾಡಬೇಕು. ನಾನು ಎಲ್ಲಾ ಧರ್ಮಗಳ ಸಾಹಿತ್ಯವನ್ನು ಓದುತ್ತೇನೆ. ಆದರೆ, ಇಸ್ಲಾಂ ಧರ್ಮವನ್ನು ಅನುಸರಿಸುತ್ತೇನೆ. ರಾಮಾಯಣದ ರಸಪ್ರಶ್ನೆಯಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಭೋದನೆಗೆ ಸರ್ಕಾರ ಚಿಂತನೆ
ಅವರ ವಾಫಿ ಕೋರ್ಸ್‌ನ ಪಠ್ಯಕ್ರಮವು ಹಿಂದೂ ಧರ್ಮ, ಸಿಖ್ ಧರ್ಮ ಮತ್ತು ಜೈನ ಧರ್ಮ ಸೇರಿದಂತೆ ಇತರ ಧರ್ಮಗಳ ಅಧ್ಯಯನವನ್ನು ಒಳಗೊಂಡಿದೆ ಎಂದು ಜಬೀರ್ ಹೇಳಿದ್ದಾರೆ. ಇತರ ಧರ್ಮಗಳ ಸಾಹಿತ್ಯವನ್ನು ಓದಬೇಡಿ ಎಂದು ಯಾರೂ ನಮ್ಮನ್ನು ಕೇಳುವುದಿಲ್ಲ. ನಮ್ಮ ಕೋರ್ಸ್ ಕೂಡ ಇತರ ಧರ್ಮಗಳ ಬಗ್ಗೆ ಕಲಿಯಲು ಮತ್ತು ಅವುಗಳ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಎಲ್ಲ ಧರ್ಮಗಳು ಸೌಹಾರ್ದತೆಯಿಂದ ಬಾಳುವಂತೆ ಹೇಳುತ್ತವೆ. ಯಾವುದೂ ದ್ವೇಷವನ್ನು ಬಿತ್ತುವ ಕೆಲಸ ಮಾಡುವುದಿಲ್ಲ. ಲಾಕ್‌ಡೌನ್ ಸಮಯದಲ್ಲಿ ರಾಮಾಯಣದ ಬಗ್ಗೆ ಸಾಕಷ್ಟು ಓದಿದ್ದೇನೆ ಎಂದು ಜಬೀರ್ ಹೇಳಿದ್ದಾರೆ.
ರಾಮಾಯಣ ಗ್ರಂಥದಿಂದ ಕಲಿಯಲು ಸಾಕಷ್ಟು ವಿಷಯಗಳಿವೆ. ಇದು ರಾಮ ಎಂಬ ಆದರ್ಶ ವ್ಯಕ್ತಿಯ ಬಗ್ಗೆ ಹೇಳುತ್ತದೆ. ಇದು ನಮಗೆ ಸಹೋದರರ ನಡುವಿನ ಸುಂದರವಾದ ಬಾಂಧವ್ಯವನ್ನು ತೋರಿಸುತ್ತದೆ. ದೇಶದಲ್ಲಿ ಹೇಗೆ ಉತ್ತಮವಾಗಿ ಆಡಳಿತ ಮಾಡಬಹುದು ಎಂದು ತೋರಿಸುತ್ತದೆ. ನಾನು ಬಾಲ್ಯದಲ್ಲಿಯೇ ರಾಮಾಯಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ ಎಂದು ಮೊಹಮ್ಮದ್ ಬಸಿತ್ ಹೇಳಿದ್ದಾರೆ.