ಆ ತಂದೆ ತಾಯಿ ತಮಗೆ ಹುಟ್ಟಿದ ಅವಳಿ ಮಕ್ಕಳು ಇನ್ನೆಂದಿಗೂ ಮುಖಾಮುಖಿಯಾಗುವುದಿಲ್ಲ ಎಂದು ಕೊರಗುತ್ತಿದ್ದರು. ತಲೆಯ ಬಳಿ ಅವೆರಡೂ ಅವಳಿ ಬಾಲಕಿಯರು ಅಂಟಿಕೊಂಡುಬಿಟ್ಟಿದ್ದರು. ಜೀವನಪರ್ಯಂತ ಇನ್ನು ಇವರು ಹೀಗೆನಾ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ ಅಪ್ಪ-ಅಮ್ಮನಿಗೆ ಇಸ್ರೇಲ್ನಲ್ಲಿ ಯುಕೆ ವೈದ್ಯರು ಕಳೆದ ಗುರುವಾರ 12 ಗಂಟೆ ಕಾಲ ಶ್ರಮಿಸಿ, ಯಶಸ್ವಿಯಾಗಿ ಮಕ್ಕಳನ್ನು ಬೇರ್ಪಡಿಸಿದ್ದಾರೆ.
ಒಂದು ವರ್ಷದ ಅವಳಿ ಹೆಣ್ಣು ಮಕ್ಕಳು ತಮ್ಮ ತಲೆಯಿಂದ ಪರಸ್ಪರ ಅಂಟಿಕೊಂಡಿದ್ದರು. ಈ ಅಪರೂಪದ ಸ್ಥಿತಿಯನ್ನು ಸಯಾಮಿ ಅವಳಿ ಅಥವಾ ಸಂಯೋಜಿತ ಅವಳಿ (conjoined twin girls) ಎಂದು ಕರೆಯಲಾಗುತ್ತದೆ. ಇಸ್ರೇಲ್ನಲ್ಲಿ ಮೊಟ್ಟಮೊದಲ ಬಾರಿಗೆ ವೈದ್ಯರ ತಂಡ ಈ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ, ಅವಳಿ ಮಕ್ಕಳನ್ನು ಬೇರ್ಪಡಿಸಿ ಪವಾಡದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಯುಕೆ ಶಸ್ತ್ರಚಿಕಿತ್ಸಕರು ಕಳೆದ ಗುರುವಾರ ಅವಳಿಗಳನ್ನು ಬೇರ್ಪಡಿಸುವ ಅಸಾಧಾರಣ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ತಲೆ ಭಾಗದಲ್ಲಿ ಅಂಟಿಕೊಂಡಿದ್ದರಿಂದ ಅವಳಿ ಮಕ್ಕಳು ಒಬ್ಬರ ಮುಖ ಮತ್ತೊಬ್ಬರು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಶಸ್ತ್ರಚಿಕಿತ್ಸೆಯ ನಂತರ ಮಕ್ಕಳು ಒಬ್ಬರನ್ನೊಬ್ಬರು ನೋಡು ಸಾದ್ಯವಾಗಿದೆ. ಬೇರ್ಪಟ್ಟ ನಂತರ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.
ಈ ಅವಳಿ ಮಕ್ಕಳನ್ನು ಬೇರ್ ಶೆವಾದಲ್ಲಿರುವ ಸೊರೊಕಾ ವಿಶ್ವವಿದ್ಯಾಲಯದ ಮೆಡಿಕಲ್ ಕೇಂದ್ರದಲ್ಲಿ ಬೇರ್ಪಡಿಸಲಾಯಿತು. ಲಂಡನ್‌ನ ಗ್ರೇಟ್ ಓರ್ಮಂಡ್ ಸ್ಟ್ರೀಟ್ ಆಸ್ಪತ್ರೆಯ (GOSH) ತಜ್ಞರು ಈ ಶಸ್ತ್ರ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು. ಈ ಶಸ್ತ್ರಚಿಕಿತ್ಸೆಯನ್ನು ವಿಶ್ವದಾದ್ಯಂತ ಸುಮಾರು 20 ಬಾರಿ ಮಾತ್ರ ಕೈಗೊಳ್ಳಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ನೆತ್ತಿಯ ಕಸಿ ಸೇರಿದಂತೆ ಇನ್ನಿತರ ತಯಾರಿಗಳು ಒಂದು ತಿಂಗಳಿನಿಂದ ನಡೆದಿತ್ತು. 3ಡಿ ಇಮೇಜಿಂಗ್ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಿಕೊಂಡು ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುಮಾರು 50 ತಜ್ಞರು ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಎಲ್ಡಾಡ್ ಸಿಲ್ಬರ್‌ಸ್ಟೈನ್ ತಿಳಿಸಿದ್ದಾರೆ.
ಕಳೆದ ವರ್ಷ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಯುಸಿ ಡೇವಿಸ್ ಹೆಲ್ತ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ, ಪ್ರತಿ 2.5 ಮಿಲಿಯನ್ ಜನನಕ್ಕೆ ಒಂದು ಮಾತ್ರ ಸಯಾಮಿ ಅವಳಿಗಳಿರುತ್ತದೆ.
ಒಡಿಶಾದ ಸಯಾಮಿ ಅವಳಿಗಳನ್ನು ಸಹ 2017 ರಲ್ಲಿ ಇದೇ ರೀತಿ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಲಾಗಿತ್ತು. ನ್ಯೂರೋ ಸರ್ಜರಿ, ನ್ಯೂರೋ ಅನಸ್ತೇಸಿಯಾ, ಪ್ಲಾಸ್ಟಿಕ್ ಸರ್ಜರಿ ತಜ್ಞರು ಸೇರಿದಂತೆ 20 ತಜ್ಞರು ಈ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈಗ ಆ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ:
45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ; ಇನ್ನೊಂದು ವರ್ಷದಲ್ಲಿ ಸಹಜಸ್ಥಿತಿಗೆ ಮರಳುವ ಭರವಸೆ
ರೋಗಿಗೆ ಎಚ್ಚರವಿದ್ದಂತೆಯೇ ಮಾತನಾಡಿಸುತ್ತಾ ಬ್ರೈನ್ ಸರ್ಜರಿ ಮಾಡಿದ ವೈದ್ಯರು; ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
Published On - 11:02 am, Mon, 6 September 21