ರೋಗಿಗೆ ಎಚ್ಚರವಿದ್ದಂತೆಯೇ ಮಾತನಾಡಿಸುತ್ತಾ ಬ್ರೈನ್ ಸರ್ಜರಿ ಮಾಡಿದ ವೈದ್ಯರು; ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಮಾಡಿದ ನಂತರ ಬಂದ ವರದಿಯನ್ನು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದರು. ಏಕೆಂದರೆ, ಆಕೆಗೆ ಬ್ರೈನ್ ಸ್ಟ್ರೋಕ್ ತೀವ್ರವಾಗಿ ಆಗಿದ್ದರಿಂದ ಆಕೆಯನ್ನು ಎಚ್ಚರದಲ್ಲಿರುವಂತೆ ನೋಡಿಕೊಂಡೇ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯ ಪರಿಸ್ಥಿತಿ ವೈದ್ಯರಿಗೆ ಎದುರಾಗಿತ್ತು.
ದೆಹಲಿ: ವಿಜ್ಞಾನ, ತಂತ್ರಜ್ಞಾನ ಮುಂದುವರೆದ ಮೇಲೆ ಯಾವುದೂ ಅಸಾಧ್ಯವಲ್ಲ ಎನ್ನುವಂತಹ ಅಚ್ಚರಿಯ ಘಟನೆಗಳು ಆಗಾಗ ಜರುಗುತ್ತಿರುತ್ತವೆ. ಮೊನ್ನೆ (ಜುಲೈ 1) ತಾನೇ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸುವ ಮೂಲಕ ಇಂತಹ ಸೋಜಿಗಗಳಿಗೆ ಸಾಕ್ಷಿಯಾಗುವ ವೈದ್ಯ ವೃಂದವನ್ನು ಸ್ಮರಿಸಿಕೊಳ್ಳಲಾಗಿದೆ. ಅದೇ ದಿನ ದೆಹಲಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆಯೊಂದು ನಡೆದಿದ್ದು, ನರರೋಗ ತಜ್ಞ ಡಾ. ಮನೀಶ್ ಕುಮಾರ್ ನೇತೃತ್ವದ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ಮಾಡಿದ್ದಾರೆ. 33 ವರ್ಷದ ಮಹಿಳೆ ಪ್ರಮಿಳಾ ಎಂಬುವವರ ಬ್ರೈನ್ ಸರ್ಜರಿ ಮಾಡಿರುವ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯನ್ನು ಮಾತನಾಡಿಸುತ್ತಲೇ ಚಿಕಿತ್ಸೆ ನೀಡಿದ್ದು ಇದರ ವಿಶೇಷ.
ದೆಹಲಿಯ ಮಹಾರಾಜ ಅಗ್ರಸೇನಾ ಆಸ್ಪತ್ರೆಯ ವೈದ್ಯರು ಈ ಶಸ್ತ್ರಚಿಕಿತ್ಸೆ ನಡೆಸಿ ಅಚ್ಚರಿಗೆ ಕಾರಣರಾಗಿದ್ದಾರೆ. ಹರಿಯಾಣದ 33 ವರ್ಷ ವಯಸ್ಸಿನ ಮಹಿಳೆ ಪ್ರಮಿಳಾಗೆ ಬ್ರೈನ್ ಸ್ಟ್ರೋಕ್ ಆಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆ ನೀಡಲೆಂದು ದೆಹಲಿಗೆ ಕರೆತರಲಾಗಿತ್ತು. ಬ್ರೈನ್ ಸ್ಟ್ರೋಕ್ ತೀವ್ರತೆಗೆ ಆಕೆಯ ಮುಖ ಸಂಪೂರ್ಣ ಬಲಭಾಗಕ್ಕೆ ತಿರುಗಿಕೊಂಡಿದ್ದು, ನಾಲಗೆಯೂ ತಡವರಿಸುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ಆಕೆಯ ದೇಹದ ಬಲಭಾಗದ ಅಂಗಾಂಗಗಳೆಲ್ಲಾ ಶಕ್ತಿಹೀನವಾಗುತ್ತಿರುವುದನ್ನು ಗಮನಿಸಿದ ವೈದ್ಯರು ತಕ್ಷಣವೇ ಆಕೆಗೆ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ.
ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಮಾಡಿದ ನಂತರ ಬಂದ ವರದಿಯನ್ನು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದರು. ಏಕೆಂದರೆ, ಆಕೆಗೆ ಬ್ರೈನ್ ಸ್ಟ್ರೋಕ್ ತೀವ್ರವಾಗಿ ಆಗಿದ್ದರಿಂದ ಆಕೆಯನ್ನು ಎಚ್ಚರದಲ್ಲಿರುವಂತೆ ನೋಡಿಕೊಂಡೇ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯ ಪರಿಸ್ಥಿತಿ ವೈದ್ಯರಿಗೆ ಎದುರಾಗಿತ್ತು. ಅದನ್ನು ರೋಗಿಯ ಕುಟುಂಬ ಸದಸ್ಯರಿಗೆ ವಿವರಿಸಿದ ವೈದ್ಯರು, ಆಕೆಯನ್ನು ಮಾತನಾಡಿಸುತ್ತಲೇ ಚಿಕಿತ್ಸೆ ನಡೆಸಬೇಕಾಗಿದೆ ಎನ್ನುವುದನ್ನು ತಿಳಿಸಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡರು.
ಬಳಿಕ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಆಕೆಗೆ ಸಂಪೂರ್ಣ ಪ್ರಜ್ಞೆ ಹೋಗದಂತೆ ನೋಡಿಕೊಂಡು, ಆಕೆಯನ್ನು ಮಾತನಾಡಿಸುತ್ತಾ, ಚಿಕಿತ್ಸೆ ಸಂದರ್ಭದಲ್ಲಿ ಆಕೆ ಸ್ಪಂದಿಸುತ್ತಿದ್ದ ರೀತಿಯನ್ನು ಗಮನಿಸುತ್ತಾ ಹೋದ ವೈದ್ಯರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೆದುಳಿನ ಭಾಗ ಮಾತು, ಧ್ವನಿ, ಮುಖ, ಕೈ, ಕಾಲು ಚಲನೆಗೆ ಸಹಕಾರಿಯಾಗುವ ಭಾಗವಾಗಿತ್ತಾದ್ದರಿಂದ ಅತ್ಯಂತ ನಿಗಾ ವಹಿಸಿ ಚಿಕಿತ್ಸೆ ನಡೆಸುವ ಅವಶ್ಯಕತೆ ಇತ್ತು, ಅದರಲ್ಲಿ ನಾವು ಯಶಸ್ವಿಯೂ ಆಗಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಪ್ರಮಿಳಾ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಚೇತರಿಕೆ ಕಂಡಿದ್ದು ಕುಟುಂಬಸ್ಥರು ವೈದ್ಯರ ತಂಡಕ್ಕೆ ಹಾಗೂ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: National Doctors Day 2021: ಭಾರತದ ಮೊದಲ ಮಹಿಳಾ ವೈದ್ಯೆಯ ಸ್ಪೂರ್ತಿದಾಯಕ ಕಥೆಯನ್ನು ಇಂದು ತಿಳಿಯಲೇಬೇಕು