ನೀವು ಕೊವಿಡ್ನಿಂದ ಈಗಷ್ಟೇ ಚೇತರಿಸಿಕೊಂಡಿದ್ದೀರಾ? ದೀರ್ಘಕಾಲ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಭಾರತದ ಟಾಪ್ ವೈದ್ಯರು
ಕೊವಿಡ್-19 ಕಾಯಿಲೆಯಿಂದ ಬಳಲಿ, ಗುಣಕಂಡವರು ನಂತರದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಕೊವಿಡ್ನಿಂದ ಚೇತರಿಸಿಕೊಂಡವರು ದೀರ್ಘ ಕಾಲದವರೆಗೆ ವೈದ್ಯಕೀಯ ನಿಗಾವಣೆಯಲ್ಲಿರಬೇಕು ಎಂದು ಏಮ್ಸ್ ವೈದ್ಯರು ಸಲಹೆ ಮಾಡಿದ್ದಾರೆ.
ದೆಹಲಿ: ಕೋವಿಡ್ನಿಂದ ಚೇತರಿಸಿಕೊಂಡ ಸಾಕಷ್ಟು ರೋಗಿಗಳಲ್ಲಿ ಮತ್ತೆಮತ್ತೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾದಂತೆ ಕೊವಿಡ್ ನಂತರದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇದನ್ನು ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ರೂಪುಗೊಳ್ಳಬೇಕಿದೆ ಎಂದು ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ (All India of Medical Sciences – AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕೊವಿಡ್-19 ಕಾಯಿಲೆಯಿಂದ ಬಳಲಿ, ಗುಣಕಂಡವರು ನಂತರದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಕೊವಿಡ್ನಿಂದ ಚೇತರಿಸಿಕೊಂಡವರು ದೀರ್ಘ ಕಾಲದವರೆಗೆ ವೈದ್ಯಕೀಯ ನಿಗಾವಣೆಯಲ್ಲಿರಬೇಕು. ಕೊರೊನಾ ಸೋಂಕಿನಿಂದ ಗುಣಹೊಂದಿದ ಹಲವು ರೋಗಿಗಳಲ್ಲಿ ಕೊರೊನಾ ವೈರಸ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ನಿರ್ಲಕ್ಷಿಸದೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಕೊವಿಡ್ನಿಂದ ಚೇತರಿಸಿಕೊಂಡ 4ರಿಂದ 12 ವಾರಗಳಲ್ಲಿ ಸೋಂಕಿನ ಲಕ್ಷಣಗಳು ಮತ್ತೆ ಕಾಣಿಸಿಕೊಂಡರೆ, ಅಂಥವರನ್ನು ಸೋಂಕಿನಿಂದ ಇನ್ನೂ ಪೂರ್ಣ ಗುಣಹೊಂದಿಲ್ಲದವರು (ಪೋಸ್ಟ್ ಅಕ್ಯೂಟ್ ಕೊವಿಡ್ ಸಿಂಡ್ರೋಮ್) ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಚಿಕಿತ್ಸೆ ನೀಡುವ ರೀತಿಯನ್ನೂ ಇದಕ್ಕೆ ಅನುಗುಣವಾಗಿಯೇ ಯೋಜಿಸಬೇಕಾಗುತ್ತದೆ. ಕೊವಿಡ್ನಿಂದ ಗುಣಹೊಂದಿದ 12 ವಾರಗಳಿಗೂ ಹೆಚ್ಚು ಕಾಲದ ನಂತರ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಪೋಸ್ಟ್ ಕೊವಿಡ್ ಸಿಂಡ್ರೋಮ್ ಅಥವಾ ನಾನ್ ಕೊವಿಡ್ ಎಂದು ಕರೆಯಲಾಗುತ್ತದೆ ಎಂದು ಡಾ.ಗುಲೇರಿಯಾ ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಶ್ವಾಸಕೋಶಗಳ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳು ಮತ್ತು ಅವುಗಳ ಸಾಮರ್ಥ್ಯ ಕಡಿಮೆಯಾಗಿರುವುದು ಕಂಡುಬರುತ್ತದೆ. ಕೆಲವು ವಾರಗಳವರೆಗೆ ಕೆಮ್ಮು, ಎದೆನೋವು, ಉದ್ವಿಗ್ನತೆ ಮತ್ತು ನಾಡಿಮಿಡಿತದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹಿರಿಯ ವೈದ್ಯರು ಹೇಳಿದರು. ಕೊವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿಯಲ್ಲಿ ಬದಲಾವಣೆ ಆಗಿರುವುದು ಮತ್ತು ಕೆಲ ಜೀವಕೋಶಗಳಿಗೆ ಧಕ್ಕೆಯಾಗಿರುವುದರಿಂದ ದೇಹ ಹೀಗೆ ಪ್ರತಿಕ್ರಿಯಿಸಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
ಕೆಲ ರೋಗಿಗಳಲ್ಲಿ ಕೀಲು ನೋವು, ಸುಸ್ತು, ತಲೆನೋವು ಕಾಣಿಸಿಕೊಳ್ಳಬಹುದು. ಇವಕ್ಕೆಲ್ಲ ಕೊವಿಡ್ ಕಾರಣವಾಗಿದ್ದರೂ, ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲ ರೋಗಿಗಳಲ್ಲಿ ಏಕಾಗ್ರತೆಯ ಕೊರತೆ ಮತ್ತು ಖಿನ್ನತೆ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಚಿಕಿತ್ಸೆಗಾಗಿ ಪೋಸ್ಟ್ ಕೊವಿಡ್ ಕ್ಲಿನಿಕ್ಗಳನ್ನು ಆರಂಭಿಸಬೇಕು. ಕೊವಿಡ್ನಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ ಪೋಸ್ಟ್ ಕೊವಿಡ್ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅಂಥವನ್ನು ನಿರ್ವಹಿಸಲು ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯು ಹೊಸದಾಗಿ ವರದಿಯಾಗುವ ಸೋಂಕಿತರ ಸಂಖ್ಯೆಗಿಂತ ಹೆಚ್ಚಾಗಿದೆ. ಸತತ 11ನೇ ದಿನ ಈ ಆಶಾದಾಯಕ ಬೆಳವಣಿಗೆ ವರದಿಯಾಗಿದೆ. ಟೆಸ್ಟಿಂಗ್ ವೇಳೆ ಪಾಸಿಟಿವ್ ವರದಿಯಾಗುವ ಪ್ರಮಾಣ ಶೇ 8.09ಕ್ಕೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 3,02,544 ಮಂದಿ ಕೊವಿಡ್-19ರಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಈವರೆಗೆ 2,37,28,011 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇ 88.69ಕ್ಕೆ ಮುಟ್ಟಿದೆ.
ಭಾರತದಲ್ಲಿ ವರದಿಯಾಗುತ್ತಿರುವ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 2,22,315ಕ್ಕೆ ಮುಟ್ಟಿದೆ. ಇದು ಕಳೆದ 38 ದಿನಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,67,52,447. ಸೋಂಕಿನಿಂದ ಈವರೆಗೆ ಒಟ್ಟು 303,720 ಮಂದಿ ಮೃತಪಟ್ಟಿದ್ದಾರೆ. ಅಮೆರಿಕ ಮತ್ತು ಬ್ರೆಝಿಲ್ ನಂತರ ಅತಿಹೆಚ್ಚು ಜನರು ಭಾರತದಲ್ಲಿ ಕೊವಿಡ್ನಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4454 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
(Recovered Covid patients need longer care opines AIIMS director dr Randeep Guleria)
ಇದನ್ನೂ ಓದಿ: ಕೊವಿಡ್ ವಾರ್ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ
Published On - 9:06 pm, Mon, 24 May 21