ಶ್ರೀನಗರ: ಭಾರತದಲ್ಲಿ ವಾಸಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (Pakistan Occupied Kashmir – PoK) ನಿವಾಸಿಗಳು ಜಮ್ಮು ನಗರದಲ್ಲಿ ಪ್ರತಿಭಟನೆ ನಡೆಸಿ ಭಾರತ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದರು. ಭುಜಗಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಬಂದಿದ್ದ ನಿರಾಶ್ರಿತರು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ‘ಆವಾಜ್ ದೋ-ಹಮ್ ಏಕ್ ಹೈ’ (ಧ್ವನಿ ಕೊಡಿ, ನಾವು ಒಂದು) ಮತ್ತು ‘ಚೀನ್ ಕೆ ಲೆಂಗೆ ಅಪ್ನಾ ಹಕ್’ (ನಮ್ಮ ಹಕ್ಕು ಪಡೆದುಕೊಳ್ಳುತ್ತೇವೆ) ಎಂದು ಘೋಷಣೆಗಳನ್ನು ಮೊಳಗಿಸಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ನಿರಾಶ್ರಿತರು, ‘ನಮ್ಮ ಮನೆಗಳನ್ನು ಅಕ್ರಮವಾಗಿ ಕಿತ್ತುಕೊಳ್ಳಲಾಗಿದೆ. ಇಲ್ಲಿರುವ ನಾವೆಲ್ಲರೂ ನಮ್ಮ ಮನೆಗಳಿಗೆ ಹಿಂದಿರುಗಬೇಕೆಂಬ ಆಸೆ ಹೊಂದಿದ್ದೇವೆ. ನಮ್ಮ ಹುಟ್ಟೂರು ನೋಡಬೇಕು, ನಮ್ಮ ಮನೆಗಳನ್ನು ನೋಡಬೇಕೆಂಬ ಆಸೆ ನಮಗಿದೆ’ ಎಂದು ಅಳಲು ತೋಡಿಕೊಂಡರು.
1947ರಲ್ಲಿ ನಡೆದ ಜನಾಂಗೀಯ ಹತ್ಯಾಕಾಂಡವನ್ನು ನಿರಾಶ್ರಿತರೊಬ್ಬರು ನೆನಪಿಸಿಕೊಂಡು ಕಣ್ಣೀರಿಟ್ಟರು. ‘1947ರಲ್ಲಿ ನನಗೆ ಆರೂವರೆ ವರ್ಷ ವಯಸ್ಸು. ನಮ್ಮ ಕುಟುಂಬದ 28 ಮಂದಿಯನ್ನು ಸಾಲಾಗಿ ನಿಲ್ಲಿಸಿ ಕೊಲ್ಲಲಾಯಿತು. ನಮ್ಮ ಕುಟುಂಬದ ಮಹಿಳೆಯರನ್ನು ತಮ್ಮೊಂದಿಗೆ ಒತ್ತಾಯದಿಂದ ಕರೆದೊಯ್ದರು. ನಾವು 1952ರಲ್ಲಿ ಇಲ್ಲಿಗೆ ಬಂದೆವು. ಸರ್ಕಾರವು ಏನಾದರೂ ಮಾಡಿದರೆ ಮತ್ತೆ ನಮ್ಮ ಮನೆಗಳಿಗೆ ಹೋಗಲು ತಯಾರಿದ್ದೇವೆ’ ಎಂದು ಹೇಳಿದರು.
ಭಾರತ ಸರ್ಕಾರವು ರಾಜತಾಂತ್ರಿಕ ಅಥವಾ ಸೇನಾ ಕಾರ್ಯಾಚರಣೆಯ ಮೂಲಕ ನಮಗೆ ನ್ಯಾಯ ಒದಗಿಸಲು ಮುಂದಾಗಬೇಕು. ನಮ್ಮ ಪೂರ್ವಜರು ವಾಸಿಸುತ್ತಿದ್ದ ಮನೆಗಳು ಪಾಕಿಸ್ತಾನದಲ್ಲಿಯೇ ಉಳಿದು ಹೋಗಿವೆ. ನಮ್ಮ ಹಕ್ಕು ನಮಗೆ ಸಿಗಬೇಕು ಎಂದು ಆಗ್ರಹಿಸಿದರು. 1947ರಲ್ಲಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾವಿರಾರು ಹಿಂದೂಗಳು ಮತ್ತು ಸಿಖ್ಖರು ದೇಶಭ್ರಷ್ಟರಾಗಬೇಕಾಯಿತು. ಮೀರ್ಪುರ್, ಮುಝಾಫರ್ಬಾದ್, ಕೊಟ್ಲಿ ಮತ್ತಿತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಿಂದೂ ಮತ್ತು ಸಿಖ್ಖರನ್ನು ಹುಡುಕಿ ಕೊಲ್ಲಲಾಯಿತು.
Published On - 1:10 pm, Sun, 23 October 22