ವಿದೇಶಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ: ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ಎಫ್ಸಿಆರ್ಎ ಲೈಸೆನ್ಸ್ ರದ್ದು
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ಮನೆತನವಾಗಿರುವ ಗಾಂಧಿ ಕುಟುಂಬದೊಂದಿಗೆ ಈ ಪ್ರತಿಷ್ಠಾನವು ನಿಕಟ ಸಂಬಂಧ ಹೊಂದಿದೆ.
ಬೆಂಗಳೂರು: ವಿದೇಶಗಳಿಂದ ದೇಣಿಗೆ ಸಂಗ್ರಹಿಸುವ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜೀವ್ ಗಾಂಧಿ ಫೌಂಡೇಶನ್ (Rajiv Gandhi Foundation – RGF) ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (Foreign Contribution Regulation Act – FCRA) ಅಡಿಯಲ್ಲಿ ನೀಡಿದ್ದ ಲೈಸೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆಯು ರದ್ದುಪಡಿಸಿದೆ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ಮನೆತನವಾಗಿರುವ ಗಾಂಧಿ ಕುಟುಂಬದೊಂದಿಗೆ ಈ ಪ್ರತಿಷ್ಠಾನವು ನಿಕಟ ಸಂಬಂಧ ಹೊಂದಿದೆ.
ಜುಲೈ 2020ರಲ್ಲಿ ಕೇಂದ್ರ ಗೃಹ ಇಲಾಖೆಯು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ವರದಿಯನ್ನು ಆಧರಿಸಿ ಪ್ರತಿಷ್ಠಾನಕ್ಕೆ ನೀಡಿದ್ದ ಲೈಸೆನ್ಸ್ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಲೈಸೆನ್ಸ್ ರದ್ದತಿ ಕುರಿತ ಮಾಹಿತಿಯನ್ನು ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಳುಹಿಸಿಕೊಡಲಾಗಿದೆ.
ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಟ್ರಸ್ಟ್ನ ವಿಶ್ವಸ್ಥರಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಸಂಸದರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇದ್ದಾರೆ.
Published On - 9:43 am, Sun, 23 October 22