ನೋಟುಗಳ ಮೇಲೆ ಸುಭಾಷ್ ಚಂದ್ರ ಬೋಸ್ ಫೋಟೋ ಪ್ರಿಂಟ್ಗೆ ಮನವಿ; 8 ವಾರದೊಳಗೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ಕೋಲ್ಕತ್ತ ಹೈಕೋರ್ಟ್ ಸೂಚನೆ
ಅಂದಹಾಗೆ ಕೋಲ್ಕತ್ತ ಹೈಕೋರ್ಟ್ಗೆ ಹೀಗೆ ಅರ್ಜಿ ಸಲ್ಲಿಸಿದವರು ಹರೇಂದ್ರನಾಥ ಬಿಸ್ವಾಸ್ ಎಂಬುವರು. ಇವರಿಗೆ 94 ವರ್ಷ ವಯಸ್ಸಾಗಿದ್ದು, ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಂಡಿದ್ದಾರೆ.
ಕೋಲ್ಕತ್ತ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್(Netaji Subhash Chandra Bose) ಅವರ ಭಾವಚಿತ್ರವನ್ನು ಮುದ್ರಿಸಲು ಕೇಂದ್ರ ಸರ್ಕಾರ(Central Government)ಕ್ಕೆ ನಿರ್ದೇಶನ ನೀಡಬೇಕು ಎಂದು ಕಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಅದನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಹಾಗೇ, ಈ ಅರ್ಜಿಗೆ 8 ವಾರಗಳ ಒಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋಲ್ಕತ್ತ ಹೈಕೋರ್ಟ್ ಸೂಚನೆ ನೀಡಿದೆ. ನೋಟುಗಳ ಮೇಲೆ ಮಹಾತ್ಮ ಗಾಂಧೀಜಿಯವರ ಫೋಟೋ ಪ್ರಿಂಟ್ ಮಾಡುವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ರ ಭಾವಚಿತ್ರವನ್ನೂ ಯಾಕೆ ಪ್ರಿಂಟ್ ಮಾಡಬಾರದು ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದ್ದು, ಅದಕ್ಕೆ ಉತ್ತರ ನೀಡುವ ಜವಾಬ್ದಾರಿಯನ್ನು ಕೋರ್ಟ್, ಕೇಂದ್ರ ಸರ್ಕಾರಕ್ಕೆ ನೀಡಿದೆ.
ಅಂದಹಾಗೆ ಕೋಲ್ಕತ್ತ ಹೈಕೋರ್ಟ್ಗೆ ಹೀಗೆ ಅರ್ಜಿ ಸಲ್ಲಿಸಿದವರು ಹರೇಂದ್ರನಾಥ ಬಿಸ್ವಾಸ್ ಎಂಬುವರು. ಇವರಿಗೆ 94 ವರ್ಷ ವಯಸ್ಸಾಗಿದ್ದು, ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಂಡಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತೀವ್ರವಾಗಿ ಹೋರಾಟ ನಡೆಸಿದವರು. ಆದರೆ ಭಾರತದ ಕೇಂದ್ರ ಸರ್ಕಾರಗಳು ಅವರಿಗೆ ಸರಿಯಾದ ರೀತಿಯ ಮಾನ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಾಗ ಭಾರತ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ವೈ.ಜೆ.ದಾಸ್ತೂರ್ ವಕಾಲತ್ತು ವಹಿಸಿದ್ದರು. ನಮಗೆ ಈ ವಿಚಾರವನ್ನು ಪರಿಶೀಲಿಸಿ, ಅಫಿಡಿವಿಟ್ ಸಲ್ಲಿಸಲು ಎಂಟು ವಾರಗಳಾದರೂ ಸಮಯ ಬೇಕು ಎಂದು ಕೇಳಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ. ಮುಂದಿನ ವಿಚಾರಣೆ 2022ರ ಫೆಬ್ರವರಿ 21ರಂದು ನಡೆಯಲಿದೆ. ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಪ್ರಕಾಶ್ ಶ್ರೀವಾಸ್ತವ್ ಮತ್ತು ನ್ಯಾಯಾಧೀಶೆ ರಾಜಶ್ರೀ ಭಾರದ್ವಾಜ್ ಅರ್ಜಿ ವಿಚಾರಣೆ ನಡೆಸಲಿದ್ದಾರೆ.
2017ರಲ್ಲಿ ಏನಾಗಿತ್ತು? ಹಿಂದೆ 2017ರಲ್ಲಿಯೂ ಒಮ್ಮೆ ಇಂಥದ್ದೇ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕೋಲ್ಕತ್ತ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಆಗ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ನೋಟಿನ ವಿನ್ಯಾಸ ಮತ್ತು ಅದರಲ್ಲಿನ ಫೋಟೋ ಬದಲಾವಣೆಯ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿಕ್ರಿಯೆಯೂ ಮುಖ್ಯ ಎಂದು ಹೇಳಿತ್ತು. ಹಾಗೇ, 2021ರ ಫೆಬ್ರವರಿಯಲ್ಲಿ ಮದ್ರಾಸ್ ಹೈಕೋರ್ಟ್ ಕೂಡ ಇಂಥದ್ದೇ ಒಂದು ಅರ್ಜಿಯನ್ನು ವಿಲೇವಾರಿ ಮಾಡಿದೆ. ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ. ಆದರೆ ಅರ್ಜಿದಾರರ ಮನವಿ ಪುರಸ್ಕರಿಸುವುದು ಕಷ್ಟ ಎಂದಿತ್ತು.
ಇದನ್ನೂ ಓದಿ: Subramanian Swamy: ಆರ್ಥಿಕತೆ, ಚೀನಾದ ಗಡಿ ವಿವಾದ ನಿರ್ವಹಣೆ ರೀತಿಗೆ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ
Published On - 1:20 pm, Tue, 14 December 21