50 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ: ಈ ಕುಟುಂಬಗಳಿಗೆ ಇಂದೇ ದೀಪಾವಳಿ ಎಂದ ಪ್ರಧಾನಿ
Rozgar Mela: ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಹೊಸದಾಗಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದವರು ರೈಲ್ವೆ ಸಚಿವಾಲಯ, ಗೃಹ ವ್ಯವಹಾರಗಳು, ಅಂಚೆ ಇಲಾಖೆ, ಕಂದಾಯ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ.

ನವದೆಹಲಿ, ಅಕ್ಟೋಬರ್ 28: ಸರ್ಕಾರಿ ವಲಯದ ಉದ್ಯೋಗಕ್ಕೆ ಹೊಸದಾಗಿ ಸೇರ್ಪಡೆಗೊಂಡ 51 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ 37 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ (Rozgar Mela) ನಡೆದಿದೆ. ನೇಮಕಾತಿ ಪತ್ರಗಳನ್ನು ವಿತರಿಸಿದ ಮಾತನಾಡಿದ ಪ್ರಧಾನಿ ಮೋದಿ ಅವರು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೋಜ್‌ಗಾರ್ ಮೇಳವನ್ನು ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರ, ಎನ್‌ಡಿಎ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ‘ರೋಜ್‌ಗಾರ್ ಮೇಳ’ ಆಯೋಜಿಸಲಾಗುತ್ತಿದೆ. ಇದುವರೆಗೆ ಲಕ್ಷಾಂತರ ಯುವಕರಿಗೆ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಪತ್ರ ನೀಡಲಾಗಿದೆ. ಇಂದು 50,000 ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ದೀಪಾವಳಿಗೆ ಸ್ವಲ್ಪ ಸಮಯವಿದೆ, ಆದರೆ ಈ ಸಂದರ್ಭವು ನೇಮಕಾತಿ ಪತ್ರಗಳನ್ನು ಸ್ವೀಕರಿಸುವ 50,000 ಮಂದಿಯ ಕುಟುಂಬಗಳಿಗೆ ದೀಪಾವಳಿಗಿಂತ ಕಡಿಮೆಯೇನಲ್ಲ ಎಂದು ಬಣ್ಣಿಸಿದರು.
ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ: ಮೋದಿ
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಿರುವ ‘ರೋಜ್‌ಗಾರ್ ಮೇಳ’ ನಮ್ಮ ಯುವಜನತೆಯ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ. ನಾವು ಉದ್ಯೋಗ ನೀಡುವುದು ಮಾತ್ರವಲ್ಲದೆ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುತ್ತಿದ್ದೇವೆ. ಇದು ಉದ್ಯೋಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ. ನಾವು ನೇಮಕಾತಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿದ್ದೇವೆ ಮಾತ್ರವಲ್ಲದೆ ಕೆಲವು ಪರೀಕ್ಷೆಗಳ ವ್ಯವಸ್ಥೆಯನ್ನು ಪುನರ್ರಚಿಸಿದ್ದೇವೆ. ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ವ್ಯವಸ್ಥೆಯಲ್ಲಿ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಎಸ್ಎಸ್ಸಿ ಪರೀಕ್ಷೆಗಳನ್ನು ಈಗ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಪ್ರಾದೇಶಿಕ ಭಾಷೆಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಭಾಷೆಯ ಅಡೆತಡೆಯನ್ನು ಎದುರಿಸಿದವರಿಗೆ ಇದು ಅವಕಾಶವನ್ನು ನೀಡಿದೆ ಎಂದು ಮೋದಿ ಹೇಳಿದರು.
#WATCH | Delhi: PM Modi says, “… ‘Rozgar Mela’ organised in various states and Union Territories of the country is the proof of our commitment to the youth. Our government is working in mission mode keeping the future of the youth in mind. We are not only giving employment but… pic.twitter.com/FWX9jqATS1
— ANI (@ANI) October 28, 2023
ಕೇಂದ್ರದ ಮೋದಿ ಸರಕಾರ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಯುವಕರಿಗೆ ಅಥವಾ ಹೊಸದಾಗಿ ನೇಮಕಗೊಂಡ ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ. ನೇಮಕಾತಿ ಪತ್ರಗಳನ್ನು ಖುದ್ದು ಪ್ರಧಾನಿ ಮೋದಿ ನೀಡುತ್ತಾರೆ. ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನೇಮಕಗೊಂಡವರ ಜತೆ ದೇಶದ ಉದ್ಯೋಗ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದರು. ಕೇಂದ್ರ ಸರ್ಕಾರದ ಈ ಉದ್ಯೋಗ ಮೇಳದಲ್ಲಿ ಇದುವರೆಗೆ ಸುಮಾರು ಲಕ್ಷ ಯುವಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ.
ಈವರೆಗೆ 6 ಲಕ್ಷ ಜನರಿಗೆ ಉದ್ಯೋಗ
ಆಗಸ್ಟ್ 28 ರವರೆಗೆ 8 ಉದ್ಯೋಗ ಮೇಳಗಳ ಅಡಿಯಲ್ಲಿ 5.5 ಲಕ್ಷಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದೇ ವೇಳೆ ಸೆ. 26 ರ ವರೆಗೆ 6 ಲಕ್ಷಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಕಳೆದ ವರ್ಷ ಅಕ್ಟೋಬರ್ 22, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಪ್ರಾರಂಭಿಸಿದ್ದರು. ಉದ್ಯೋಗ ಮೇಳದ ಮೂಲಕ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶದ ಕಾಂಚ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ
ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಹೊಸದಾಗಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದವರು ರೈಲ್ವೆ ಸಚಿವಾಲಯ, ಗೃಹ ವ್ಯವಹಾರಗಳು, ಅಂಚೆ ಇಲಾಖೆ, ಕಂದಾಯ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳವು ಒಂದು ಪ್ರಮುಖ ಹೆಜ್ಜೆಯಾಗಿದೆ. ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Sat, 28 October 23