ಹಿಂದುತ್ವದ ಹೆಸರಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ; ಬಿಜೆಪಿ, ಆರ್ಎಸ್ಎಸ್ ವಿರುದ್ಧ ಟೀಕೆ
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಎನ್ನಿಸಿರುವ ಆರ್ಎಸ್ಎಸ್ಗಳು ಹಿಂದುತ್ವವನ್ನು ಎತ್ತಿಹಿಡಿಯುತ್ತಿವೆ ಎಂದು ಜನರು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇವೆರಡೂ ಕೂಡ ಹಿಂದುತ್ವವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಮುಫ್ತಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ತಮ್ಮ ಸನ್ರೈಸ್ ಓವರ್ ಅಯೋಧ್ಯಾ ಎಂಬ ಪುಸ್ತಕದಲ್ಲಿ ಹಿಂದುತ್ವವನ್ನು ಉಗ್ರಸಂಘಟನೆಗಳಾದ ಐಸಿಸ್ ಮತ್ತು ಬೋಕೊ ಹರಾಮ್ಗೆ ಹೋಲಿಸುವ ಮೂಲಕ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮತ್ತು ಅದರ ಮಾರ್ಗದರ್ಶಕವಾಗಿರುವ ಆರ್ಎಸ್ಎಸ್ ಸಂಘಟನೆಗಳು ಹಿಂದುತ್ವ ಮತ್ತು ಹಿಂದೂವಾದವನ್ನು ಅಪಹರಿಸಿವೆ ಎಂದು ಹೇಳಿದ್ದಾರೆ.
ಬಿಜೆಪಿ ತಾನು ಎಲ್ಲರನ್ನೂ ಒಳಗೊಳ್ಳುವುದಾಗಿ ಹೇಳಿಕೊಳ್ಳುತ್ತದೆ. ಆದರೆ ಈ ಪಕ್ಷ ಸನಾತನ ಧರ್ಮಕ್ಕೆ ವಿರೋಧವಾಗಿದೆ. ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಎನ್ನಿಸಿರುವ ಆರ್ಎಸ್ಎಸ್ಗಳು ಹಿಂದುತ್ವವನ್ನು ಎತ್ತಿಹಿಡಿಯುತ್ತಿವೆ ಎಂದು ಜನರು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇವೆರಡೂ ಕೂಡ ಹಿಂದುತ್ವವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಮೆಹಬೂಬಾ ಮುಫ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ, ಸನಾತನ ಧರ್ಮ ಎಂದಿಗೂ ಕೋಮುವಾದವನ್ನು ಸಾರುವುದಿಲ್ಲ. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ ಕೋಮುವಾದದ ಕೊಳ್ಳಿ ಇಟ್ಟು ಜನರು ಕಚ್ಚಾಡುವಂತೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಕೋಮುವಾದಿ ಪಕ್ಷಗಳನ್ನು ಖಂಡಿತವಾಗಿಯೂ ಐಸಿಸ್ನೊಂದಿಗೆ ಹೋಲಿಸಬಹುದು. ಯಾಕೆಂದರೆ ಅವರೆಲ್ಲ ಧರ್ಮದ ಹೆಸರಿನಲ್ಲಿ ಹಿಂದೂ-ಮುಸ್ಲಿಮರು ಜಗಳವಾಡುವಂತೆ ಮಾಡುವವರು. ಐಸಿಸ್ ಧರ್ಮದ ಹೆಸರಿನಲ್ಲಿ ಜನರನ್ನು ಕೊಲ್ಲುತ್ತದೆ. ಅದರಂತೆ ನಡೆದುಕೊಳ್ಳುವ ಯಾವುದೇ ಪಕ್ಷ, ಸಂಘಟನೆಗಳೂ ಕೂಡ ಐಸಿಸ್ನಂತೆಯೇ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ