ಆರ್‌ಎಸ್‌ಎಸ್ ಶತಮಾನೋತ್ಸವ: ಇಂದಿನ ಕಾರ್ಯಕ್ರಮದ ವಿವರ, ಲೈವ್ ಲಿಂಕ್ ಇಲ್ಲಿದೆ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ ನೂರು ವರ್ಷಗಳಾದ ಸಂದರ್ಭದಲ್ಲಿ ‘‘ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ: ಹೊಸ ದಿಗಂತಗಳು’’ ಎಂಬ ಶೀರ್ಷಿಕೆಯ 3 ದಿನಗಳ ಉಪನ್ಯಾಸ ಸರಣಿ ಆಗಸ್ಟ್ 26 ರಂದು ಆರಂಭವಾಗಿದೆ. ದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ನವದೆಹಲಿ, ಆಗಸ್ಟ್ 27: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಪ್ರಯುಕ್ತ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಗಸ್ಟ್ 26ರಿಂದ 28 ರವರೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ‘‘ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ: ಹೊಸ ದಿಗಂತಗಳು’’ ಉಪನ್ಯಾಸ ಸರಣಿಗೆ ಮಂಗಳವಾರ ಚಾಲನೆ ದೊರೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದೂ ರಾಷ್ಟ್ರದ ಆರ್‌ಎಸ್‌ಎಸ್ ಪರಿಕಲ್ಪನೆಯು ಯಾರಿಗೂ ವಿರುದ್ಧವಾಗಿಲ್ಲ ಅಥವಾ ಯಾರನ್ನೂ ಹೊರಗಿಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವಾಗ, ಆ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಹಿಂದೂ ರಾಷ್ಟ್ರ ಎಂದು ಹೇಳುವಾಗ, ನಾವು ಯಾರನ್ನೋ ಬಿಟ್ಟುಬಿಡುತ್ತೇವೆ ಎಂದು ಅರ್ಥವಲ್ಲ. ಅಥವಾ ನಾವು ಯಾರನ್ನೂ ವಿರೋಧಿಸುತ್ತೇವೆ ಎಂದಲ್ಲ. ಸಂಘವು ಪ್ರತಿಕ್ರಿಯೆ ಅಥವಾ ವಿರೋಧದಿಂದ ಹುಟ್ಟಿಲ್ಲ ಎಂದು ಭಾಗವತ್ ಹೇಳಿದರು.
ಸಂಘವು ಹಿಂದೂ ಎಂಬ ಪದವನ್ನು ಬಳಸುತ್ತಿದ್ದರೂ, ಅದರ ತಿರುಳು ‘ವಸುಧೈವ ಕುಟುಂಬಕಂ’ ಎಂಬುದೇ ಆಗಿದೆ. ಸಂಘವು ಗ್ರಾಮ, ಸಮಾಜ ಮತ್ತು ಇಡೀ ರಾಷ್ಟ್ರವನ್ನು ತನ್ನದೇ ಎಂದು ಭಾವಿಸುತ್ತದೆ. ಸಂಘದ ಬೆಳವಣಿಗೆ ಎಂಬುದು ನಿಧಾನವಾದ ಮತ್ತು ನಿರಂತರವಾದ ಪ್ರಕ್ರಿಯೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಆರ್‌ಎಸ್‌ಎಸ್ ಶತಮಾನೋತ್ಸವ ಪ್ರಯುಕ್ತ ನಾಳೆಯಿಂದ 3 ದಿನ ವಿಶೇಷ ಕಾರ್ಯಕ್ರಮ ಆಯೋಜನೆ
ಭಾರತವನ್ನು ಕೇಂದ್ರ ಸ್ಥಾನದಲ್ಲಿಟ್ಟುಕೊಂಡು ಸಂಘವನ್ನು ರಚಿಸಲಾಯಿತು ಮತ್ತು ಭಾರತವನ್ನು ವಿಶ್ವಗುರುವನ್ನಾಗಿಸುವುದೇ ಸಂಘದ ಮುಖ್ಯ ಉದ್ದೇಶವಾಗಿದೆ. ಸಂಘದ ಕೆಲಸಕ್ಕೆ ‘‘ಭಾರತ್ ಮಾತಾ ಕಿ ಜೈ’’ ಘೋಷಣೆಯೇ ಸ್ಫೂರ್ತಿ. ಅದು ಸಂಘ ಪ್ರಾರ್ಥನೆಯ ಕೊನೆಯಲ್ಲಿಯೂ ಪ್ರತಿಧ್ವನಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು.
ಉಪನ್ಯಾಸ ಸರಣಿಯ 2ನೇ ದಿನದ ಕಾರ್ಯಕ್ರಮ ಇಂದು (ಆಗಸ್ಟ್ 27) ಸಂಜೆ 5.30 ರಿಂದ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಮೋಹನ್ ಭಾಗವತ್ ಸಂವಾದ ನಡೆಸಲಿದ್ದಾರೆ.
ಇಂದಿನ ಕಾರ್ಯಕ್ರಮದ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
