Sign In

By signing in or creating an account, you agree with Associated Broadcasting Company's Terms & Conditions and Privacy Policy.

Parliament- ಸಂಸತ್​ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು; ಸದನದಲ್ಲಿ ಗದ್ದಲ

Motion of Thanks in Parliament- ಅದಾನಿ ವಿವಾದದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿ ಮೋದಿ ಹೆಸರನ್ನು ಬಾರಿ ಬಾರಿ ಪ್ರಸ್ತಾಪಿಸಿ ಟೀಕಿಸಿದರು. ಈ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಕಾರ ಎತ್ತಿ, ತಾವು ಪ್ರಧಾನಿ ವಿರುದ್ಧ ಪದೇ ಪದೇ ಹೀಯಾಳಿಸುವುದು ಸರಿಯಲ್ಲ ಎಂದರು.

Parliament- ಸಂಸತ್​ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು; ಸದನದಲ್ಲಿ ಗದ್ದಲ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 08, 2023 | 1:25 PM

ನವದೆಹಲಿ: ಭಾರತದ ಪ್ರಮುಖ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಆಸ್ತಿಪಾಸ್ತಿ ಬೆಳವಣಿಗೆ ಮತ್ತು ಅವರ ಬಗ್ಗೆ ಹಿಂಡನ್ಬರ್ಗ್ ರಿಸರ್ಚ್ (Hindenburg Research Report) ಪ್ರಕಟಿಸಿದ ವರದಿ ವಿಚಾರಗಳು ಸಂಸತ್​ನಲ್ಲಿ ಕೋಲಾಹಲ ಎಬ್ಬಿಸುವುದು ಇವತ್ತೂ ಮುಂದುವರಿದಿದೆ. ಇಂದು ಸಂಸತ್ ಅಧಿವೇಶನದಲ್ಲಿ (Motion of Thanks on President Address) ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅದಾನಿ ವಿಚಾರ ಕೆದಗಿ ಪ್ರಧಾನಿ ಮೋದಿ ವಿರುದ್ಧ ಟೀಕೆಗಳ ಸುರಿಮಳೆಗೈದರು.

ನಿನ್ನೆ ಸೋಮವಾರ ರಾಹುಲ್ ಗಾಂಧಿ ಕೂಡ ಅದಾನಿ ವಿಚಾರ ಎತ್ತಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇವತ್ತು ಖರ್ಗೆ ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಪ್ರಧಾನಿ ಮೋದಿಯನ್ನು ಮೌನಿ ಬಾಬಾ ಎಂದು ಬಣ್ಣಿಸಿ ಟೀಕಿಸಿದರು. ಇದಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು, ಅದಾನಿ ವಿವಾದದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿ ಮೋದಿ ಹೆಸರನ್ನು ಬಾರಿ ಬಾರಿ ಪ್ರಸ್ತಾಪಿಸಿ ಟೀಕಿಸಿದರು. ಈ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಕಾರ ಎತ್ತಿ, ತಾವು ಪ್ರಧಾನಿ ವಿರುದ್ಧ ಪದೇ ಪದೇ ಹೀಯಾಳಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಸಂಸತ್​​ನಲ್ಲಿ ಆಕ್ಷೇಪಾರ್ಹ ಪದ ಬಳಸಿದ ಮಹುವಾ ಮೊಯಿತ್ರಾ; ನಾಲಗೆ ಮೇಲೆ ನಿಯಂತ್ರಣವಿರಲಿ ಎಂದ ಹೇಮಾ ಮಾಲಿನಿ

ಭಾರತೀಯ ಉದ್ಯಮಿ ಬೆಳೆದರೆ ಇವರಿಗೇನು ಕಷ್ಟ ಎಂದ ರವಿಶಂಕರ್

ಗೌತಮ್ ಅದಾನಿ ಆಸ್ತಿ ಇತ್ತೀಚಿನ ವರ್ಷಗಳಲ್ಲಿ ಬಹಳ ಹೆಚ್ಚಾಗಿದ್ದರ ಬಗ್ಗೆ ವಿಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡಿದ್ದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ರವಿಶಂಕರ್ ತೀಕ್ಷ್ಣ ಉತ್ತರ ನೀಡಿದರು. ಭಾರತೀಯ ಉದ್ಯಮಿಯೊಬ್ಬರು ಯಾಕೆ ಬೆಳೆಯಬಾರದು ಎಂದ ಅವರು, ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲೂ ಅದಾನಿ ಯೋಜನೆಗಳು ಇರುವ ಬಗ್ಗೆ ವಿವರಗಳನ್ನು ಹಂಚಿಕೊಂಡರು.

ಹಾಗೆಯೇ, ವಿಪಕ್ಷಗಳಿಗೆ ಭಾರತೀಯ ಆರ್ಥಿಕತೆ ಬೆಳೆಯುತ್ತಿರುವುದು ಚಿಂತೆಗೀಡು ಮಾಡಿದೆ ಎಂದೂ ರವಿಶಂಕರ್ ಚಾಟಿ ಬೀಸಿದರು.

ನಾನು ದೇಶವಿರೋಧಿಯಲ್ಲ, ಭೂಮಿಪುತ್ರ ಎಂದ ಖರ್ಗೆ

ಇದೇ ವೇಳೆ, ಅದಾನಿ ವಿರುದ್ಧ ಟೀಕೆ ಮಾಡುವ ಜನರನ್ನು ಸರ್ಕಾರ ದೇಶವಿರೋಧಿಗಳೆಂದು ಪರಿಗಣಿಸುತ್ತದೆ ಎಂದು ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದರು.

ನಾನು ಸತ್ಯ ಮಾತನಾಡಿದರೆ ದೇಶವಿರೋಧಿಯಾಗುತ್ತೇನಾ? ನಾನು ದೇಶದ್ರೋಹಿಯಲ್ಲ. ಇಲ್ಲಿರುವ ಯಾರಿಗಿಂತಲೂ ನಾನು ಹೆಚ್ಚು ದೇಶಪ್ರೇಮಿಯಾಗಿದ್ದೇನೆ. ನಾನೊಬ್ಬ ಭೂಮಿಪುತ್ರ. ನೀವು ದೇಶವನ್ನು ಕೊಳ್ಳೆ ಹೊಡೆದು ನನ್ನನ್ನು ದೇಶವಿರೋಧಿ ಎನ್ನುತ್ತಿದ್ದೀರಿ ಎಂದು ಖರ್ಗೆ ಹೇಳಿದರು.

ಇದನ್ನೂ ಓದಿ: PM Modi’s Jacket: ಬೆಂಗಳೂರಿನಲ್ಲಿ ಇಂಡಿಯನ್ ಆಯಿಲ್ ಕಂಪನಿ ಉಡುಗೊರೆಯಾಗಿ ನೀಡಿದ್ದ ನೀಲಿ ಬಣ್ಣದ ಹಾಫ್​ಕೋಟ್ ಧರಿಸಿ ಸಂಸತ್​ಗೆ ಬಂದ ಪ್ರಧಾನಿ ಮೋದಿ

2014ರಲ್ಲಿ ನಾನು ತಿನ್ನೋದಿಲ್ಲ, ತಿನ್ನೋಕೂ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಕೆಲ ಉದ್ಯಮಿಗಳಿಗೆ ತಿನ್ನೋಕೆ ಯಾಕೆ ಬಿಟ್ಟಿದ್ದಾರೆ ಇವರು? ಪ್ರಧಾನಿ ಮೋದಿ ಅವರ ಒಬ್ಬ ಆಪ್ತರ ಆಸ್ತಿ ಎರಡೂವರೆ ವರ್ಷದಲ್ಲಿ 13 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಇವರ ಆಸ್ತಿ 50 ಸಾವಿರ ಕೋಟಿ ರೂ ಇತ್ತು. 2019ರಲ್ಲಿ 1 ಲಕ್ಷ ಕೋಟಿಗೆ ಬೆಳೆಯಿತು. ಆದರೆ, ಅದಾದ ಬಳಿಕ ಎರಡು ವರ್ಷದಲ್ಲಿ 12 ಲಕ್ಷಕ್ಕೆ ಆಸ್ತಿ ಮೌಲ್ಯ ಹೆಚ್ಚಾಗಲು ಏನು ಕಾರಣ? ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದರು.

ಹಾಗೆಯೇ, ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ನಮ್ಮ ಮೌನಿ ಬಾಬಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮೌನವಾಗಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಖರ್ಗೆ ತಿವಿದರು.

ಮೋದಿ ಅವರನ್ನು ಖರ್ಗೆ ಮೌನಿ ಬಾಬಾ ಎಂದು ಸಂಬೋಧಿಸಿದಕ್ಕೆ ಆಡಳಿತ ಪಕ್ಷಗಳ ಸದಸ್ಯರು ತೀವ್ರವಾಗಿ ಆಕ್ಷೇಪಿಸಿ ಗದ್ದಲ ನಡೆಸಿದರು.

Published On - 1:20 pm, Wed, 8 February 23