ಶಿಮ್ಲಾ: ಶಿಮ್ಲಾದ ಢಲ್ಲಿ ಪ್ರದೇಶದ ಸಂಜೌಲಿ ಮಸೀದಿಯ ಪ್ರತಿನಿಧಿಗಳು ಇಂದು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳನ್ನು ಭೇಟಿ ಮಾಡಿ ಮಸೀದಿಯಲ್ಲಿನ ಅಕ್ರಮ ಮಹಡಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಿದರು. ವಕ್ಫ್ ಮಂಡಳಿಗೆ ಸಂಬಂಧಿಸಿದ ಅಧಿಕಾರಿಗಳು ಮಸೀದಿಯ ಎಲ್ಲಾ ಅಕ್ರಮ ಮಹಡಿಗಳನ್ನು ಕೆಡವಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಅನುಮತಿ ನೀಡುವವರೆಗೆ ಈ ಮಹಡಿಗಳನ್ನು ಸೀಲ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಅಧಿಕಾರಿ, ‘ನೀವು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು. ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಿಟಿಐ ಜೊತೆ ಮಾತನಾಡಿದ ಕುತಾಬ್ ಮಸೀದಿಯ ಇಮಾಮ್, “ನಾವು ಸದ್ಯಕ್ಕೆ ಅಕ್ರಮ ಭಾಗವನ್ನು ಮುಚ್ಚಬೇಕು ಮತ್ತು ಅಕ್ರಮ ಎಂದು ಸಾಬೀತಾದ ಭಾಗವನ್ನು ಮುಚ್ಚಬೇಕು ಎಂದು ಒತ್ತಾಯಿಸಿದ್ದೇವೆ. ನಂತರ ಪಾಲಿಕೆ ಅದನ್ನು ಕೆಡವುತ್ತದೆ, ಇಲ್ಲದಿದ್ದರೆ ನಾವು ಅದನ್ನು ಕೆಡವುತ್ತೇವೆ. ಈಗಿನ ಬೆಳವಣಿಗೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ; ಸರ್ವೆಗೆ ಜಾಗ ಅಗೆಯಲು ಎಎಸ್‌ಐಗೆ ಅನುಮತಿ ಕೋರಿ ಹಿಂದೂಗಳಿಂದ ಒತ್ತಾಯ
ಸಂಜೌಲಿ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣಕ್ಕೆ ಪ್ರತಿಕ್ರಿಯೆಯಾಗಿ ಶಿಮ್ಲಾ ವ್ಯಾಪಾರಿ ಮಂಡಲ್ ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಧ ದಿನದ ಮಾರುಕಟ್ಟೆ ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಸೆಪ್ಟೆಂಬರ್ 11ರಂದು ನಡೆದ ಪ್ರತಿಭಟನೆಯ ನಂತರ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಅಕ್ರಮ ಮಸೀದಿ ನಿರ್ಮಾಣದ ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿರುವಾಗ ಹಿಂದೂ ಸಂಘಟನೆಗಳ ಸದಸ್ಯರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಸ್ಥಳೀಯ ಅಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿದ್ದರೂ ಮಸೀದಿ ನಿರ್ಮಾಣದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಸಂಜೌಲಿ ಪ್ರದೇಶದಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಕೆಡವಲು ಒತ್ತಾಯಿಸಿ ಬುಧವಾರ ಬೆಳಗ್ಗೆ ಶಿಮ್ಲಾದಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಆಂದೋಲನದ ಸಂದರ್ಭದಲ್ಲಿ, ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು ಮತ್ತು ಬ್ಯಾರಿಕೇಡ್‌ಗಳನ್ನು ಮುರಿದರು ಮತ್ತು ಕಲ್ಲು ತೂರಾಟ ನಡೆಸಿದರು. ಇದಾದ ಬಳಿಕ ಪೊಲೀಸರು ಅವರನ್ನು ಚದುರಿಸಲು ಜಲಫಿರಂಗಿ ಮತ್ತು ಲಾಠಿ ಚಾರ್ಜ್ ಮಾಡಿದರು.
ಇದನ್ನೂ ಓದಿ: Shimla Mosque Row: ಸಂಜೌಲಿ ಮಸೀದಿ ಗಲಭೆ; ಶಿಮ್ಲಾದಲ್ಲಿ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಏಕೆ?
2010ರಲ್ಲಿ ಪ್ರಾರಂಭವಾದ ಮಸೀದಿಯ ನಿರ್ಮಾಣ ಪ್ರಾರಂಭವಾದಾಗ ಈ ವಿವಾದವು ಪ್ರಾರಂಭವಾಯಿತು. ಹಲವಾರು ಸೂಚನೆಗಳ ಹೊರತಾಗಿಯೂ ಮಸೀದಿಯನ್ನು 6750 ಚದರ ಅಡಿಗಳಿಗೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ. ವಿವಾದಕ್ಕೆ ಒಳಗಾಗಿರುವ ಭೂಮಿ ಹಿಮಾಚಲ ಪ್ರದೇಶದ ಸರ್ಕಾರಿ ಆಸ್ತಿಯಾಗಿದೆ. ಆದರೆ, ಮಸೀದಿಯ ಇಮಾಮ್ ಇದು 1947ಕ್ಕೂ ಹಿಂದಿನ ಹಳೆಯ ಕಟ್ಟಡವಾಗಿದೆ ಮತ್ತು ವಕ್ಫ್ ಮಂಡಳಿಯ ಒಡೆತನದಲ್ಲಿದೆ ಎಂದು ಹೇಳಿಕೊಳ್ಳುತ್ತಾರೆ.
ಸೆ.7ರಂದು ಪೌರಾಯುಕ್ತರ ಕಚೇರಿಯಲ್ಲಿ ಮಸೀದಿ ಅಕ್ರಮ ನಿರ್ಮಾಣ ಆರೋಪದ ಕುರಿತು ವಿಚಾರಣೆ ನಡೆಸಲಾಗಿತ್ತು. 2010 ರಿಂದ ಈ ವಿಷಯದ ಬಗ್ಗೆ 45 ವಿಚಾರಣೆಗಳು ನಡೆದಿವೆ. ಆದರೆ, ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಅವಧಿಯಲ್ಲಿ ಮಸೀದಿಯು 2 ಅಂತಸ್ತಿನ ರಚನೆಯಿಂದ 5 ಅಂತಸ್ತಿನ ಕಟ್ಟಡಕ್ಕೆ ಬೆಳೆದಿದೆ. ಈ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ತ್ವರಿತ ಹೆಚ್ಚಳವಾಗಿದೆ. ಇದಕ್ಕೆ ಸ್ಥಳೀಯರ ಆಕ್ಷೇಪ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ