ಸಾಲ ಮರುಪಾವತಿ ಮಾಡದಿರುವುದಕ್ಕೆ ನಟ, ರಾಜಕಾರಣಿ ಶರತ್ ಕುಮಾರ್-ರಾಧಿಕಾ ದಂಪತಿಗೆ 1ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

|

Updated on: Apr 07, 2021 | 3:31 PM

SarathKumar and Radhika Imprisonment: ಶರತ್ ಕುಮಾರ್ ಮತ್ತು ರಾಧಿಕಾ ಅವರು ರೇಡಿಯಂಟ್ ಗ್ರೂಪ್​ಗೆ ಸಾಲ ಮರುಪಾವತಿಗಾಗಿ ಚೆಕ್ ನೀಡಿದ್ದರೂ ಅದು ಬೌನ್ಸ್ ಆಗಿತ್ತು. ಈ ಬಗ್ಗೆ 2018ರಲ್ಲಿ ರೇಡಿಯನ್ಸ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ತಾರಾದಂಪತಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಾಲ ಮರುಪಾವತಿ ಮಾಡದಿರುವುದಕ್ಕೆ ನಟ, ರಾಜಕಾರಣಿ ಶರತ್ ಕುಮಾರ್-ರಾಧಿಕಾ ದಂಪತಿಗೆ 1ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಶರತ್ ಕುಮಾರ್-ರಾಧಿಕಾ
Follow us on

ಚೆನ್ನೈ: ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ತಮಿಳಿನ ತಾರಾ ದಂಪತಿ ನಟ, ರಾಜಕಾರಣಿ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಸಾಲ ಮರುಪಾವತಿ ಮಾಡಿಲ್ಲ ಎಂದು ಶರತ್ ಕುಮಾರ್ ವಿರುದ್ಧ 7 ಪ್ರಕರಣಗಳು ಮತ್ತು ರಾಧಿಕಾ ವಿರುದ್ಧ 2 ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ದಂಪತಿಗೆ ಜೈಲು ಶಿಕ್ಷೆ ವಿಧಿಸಿದೆ.

2015ರಲ್ಲಿ ರಾಧಿಕಾ ಮತ್ತು ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ರೇಡಿಯನ್ಸ್ ಗ್ರೂಪ್​ನಿಂದ ಸಾಲ ಪಡೆದು ‘ಇದು ಎನ್ನ ಮಾಯಂ’ ಎಂಬ ಸಿನಿಮಾ ನಿರ್ಮಿಸಿತ್ತು. ಈ ಸಿನಿಮಾವನ್ನು ಎ.ಎಲ್. ವಿಜಯ್ ಅವರು ನಿರ್ದೇಶಿಸಿದ್ದು ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಶರತ್ ಕುಮಾರ್ ಮತ್ತು ರಾಧಿಕಾ ಅವರು ರೇಡಿಯನ್ಸ್ ಗ್ರೂಪ್ ಗೆ ಸಾಲ ಮರುಪಾವತಿಗಾಗಿ ಚೆಕ್ ನೀಡಿದ್ದರೂ ಅದು ಬೌನ್ಸ್ ಆಗಿತ್ತು. ಈ ಬಗ್ಗೆ 2018ರಲ್ಲಿ ರೇಡಿಯನ್ಸ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ತಾರಾದಂಪತಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಏನಿದು  ಪ್ರಕರಣ?
ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಪಾಲುದಾರರಾಗಿರುವ ಸಿನಿಮಾ ನಿರ್ಮಾಣ ಸಂಸ್ಥೆ ಮ್ಯಾಜಿಕ್ ಫ್ರೇಮ್ಸ್ ರೇಡಿಯನ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್​ನಿಂದ ₹1.50 ಕೋಟಿ ಸಾಲ ಪಡೆದಿತ್ತು. ಆಮೇಲೆ ಸಾಲ ಮರುಪಾವತಿಗಾಗಿ 2 ಚೆಕ್ ಗಳನ್ನು ನೀಡಿತ್ತು. ಇದರ ಜತೆಗೆ ಶರತ್ ಕುಮಾರ್ ರೇಡಿಯನ್ಸ್ ಮೀಡಿಯಾದಿಂದ ₹50 ಲಕ್ಷ ಕೈ ಸಾಲ ಪಡೆದಿದ್ದರು. ಇದನ್ನು ಮರು ಪಾವತಿಸಲು ₹10 ಲಕ್ಷ ಮೌಲ್ಯದ 5 ಚೆಕ್ ಗಳನ್ನು ನೀಡಿದ್ದರು. ಆದರೆೆ ಈ ಎಲ್ಲ ಚೆಕ್ ಗಳು ಬೌನ್ಸ್ ಆಗಿವೆ ಎಂದು ರೇಡಿಯನ್ಸ್ ಮೀಡಿಯಾ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಹಿಂದೆ ತಮ್ಮ ವಿರುದ್ಧ ಸೈದಾಪೇಟ್ ಫಾಸ್ಟ್ ಟ್ರ್ಯಾಕ್​ ಕೋರ್ಟ್​ನಲ್ಲಿ ನಡೆದ ಅಪರಾಧ ಪ್ರಕರಣ ವಿಚಾರಣೆ ಪ್ರಶ್ನಿಸಿ ರಾಧಿಕಾ-ಶರತ್ ಕುಮಾರ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದಾಗ್ಯೂ ಮೇ 2019ರಲ್ಲಿ ಶರತ್ ಕುಮಾರ್, ರಾಧಿಕಾ ಮತ್ತು ಇತರ ಇಬ್ಬರು ವ್ಯಕ್ತಿಗಳ ವಿರುದ್ಧವಿದ್ದ ಎರಡು ಚೆಕ್ ಬೌನ್ಸ್ ಪ್ರಕರಣಗಳ ಅಪರಾಧ ವಿಚಾರಣೆ ತಡೆಗೆ ನ್ಯಾಯಮೂರ್ತಿ ಜಿ.ಕೆ ಇಲ್ಲಂತಿರೈಯನ್ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ವಿಚಾರಣೆಯನ್ನು ಆರು ತಿಂಗಳುಗಳೊಳಗೆ ಪೂರ್ಣಗೊಳಿಸಲು ಸೈದಾಪೇಟ್​ನಲ್ಲಿರುವ ಫಾಸ್ಟ್ ಟ್ರ್ಯಾಕ್ ಕೋರ್ಟ್​ಗೆ ನಿರ್ದೇಶಿಸಿದ್ದರು. ಈ ಹೊತ್ತಲ್ಲಿ ಪ್ರಸ್ತುತ ಪ್ರಕರಣವು ಚೆನ್ನೈನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶಾಸಕ, ಸಂಸದರ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.

ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಅಲಿಸಿಯಾ ಶರತ್ ಕುಮಾರ್-ರಾಧಿಕಾ ದಂಪತಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಶರತ್ ಕುಮಾರ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ.

ಇದನ್ನೂ ಓದಿ: Tamil Nadu Assembly Elections 2021: ಚುನಾವಣಾ ಮೈತ್ರಿಗಾಗಿ ಕಮಲ್ ಹಾಸನ್ ಭೇಟಿ ಮಾಡಿದ ಶರತ್ ಕುಮಾರ್

Thalapathy Vijay: ಮತಗಟ್ಟೆ ಮನೆ ಪಕ್ಕದಲ್ಲಿರುವ ಕಾರಣ ನಟ ವಿಜಯ್ ಸೈಕಲ್​ನಲ್ಲಿ ಬಂದಿದ್ದು, ಬೇರೆ ಅರ್ಥ ಕಲ್ಪಿಸಬೇಡಿ; ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಸ್ಪಷ್ಟನೆ

(SarathKumar and Radhika Sentenced to imprisonment by special court as they Failed to repay loans )

 

Published On - 2:20 pm, Wed, 7 April 21