ನವೆಂಬರ್ 14ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ನೀಡುತ್ತಿದ್ದು ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ಸಚಿವರ ಮೂಲಕ..
ದೆಹಲಿ: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಅವರು ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ನವೆಂಬರ್ 14 ರಂದು ಬೆಳಗ್ಗೆ ಆಗಮಿಸಲಿದ್ದು ಮರುದಿನ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಹೊರಡಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ನೀಡುತ್ತಿದ್ದು ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ಸಚಿವರ ಮೂಲಕ ಭಾರತ ಪತ್ರ ಕಳುಹಿಸಿತ್ತು. ಸೌದಿ ಇಂಧನ ಸಚಿವ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಈ ವಾರ ಭಾರತಕ್ಕೆ ಭೇಟಿ ನೀಡಿದ್ದರು. ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಸೇರಿದಂತೆ ಭಾರತದ ಉನ್ನತ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದರು.
ಅರಬ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಯುವರಾಜ
ಸೌದಿ ಅರೇಬಿಯಾದ ಯುವರಾದ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವೈದ್ಯರ ಸಲಹೆಯಂತೆ ಅಲ್ಜೀರಿಯಾದಲ್ಲಿ ಮುಂಬರುವ ಅರಬ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಲ್ಜೀರಿಯಾದ ಪ್ರೆಸಿಡೆನ್ಸಿ ತಿಳಿಸಿದೆ. ಯುವರಾಜಕುಮಾರ ಮೊಹಮ್ಮದ್ ಅವರ ಸ್ಥಿತಿಯ ಬಗ್ಗೆ ಸೌದಿ ಅರೇಬಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಲ್ಜಝೀರಾ ವರದಿ ಮಾಡಿದೆ.
ಶನಿವಾರ ತಡರಾತ್ರಿ ಅಲ್ಜೀರಿಯಾ ಪ್ರೆಸ್ ಸರ್ವಿಸ್‌ನಲ್ಲಿ ಅರೇಬಿಕ್ ಮತ್ತು ಫ್ರೆಂಚ್‌ನಲ್ಲಿ ನಡೆಸಲಾದ ಹೇಳಿಕೆಗಳು ಅಧ್ಯಕ್ಷ ಅಬ್ದೆಲ್‌ಮಡ್‌ಜಿದ್ ಟೆಬ್ಬೌನ್ ಅವರ ಕಚೇರಿಯಿಂದ ಅವರ ಮತ್ತು ಪ್ರಿನ್ಸ್ ಮೊಹಮ್ಮದ್ ನಡುವಿನ ದೂರವಾಣಿ ಕರೆ ಕುರಿತು ಹೇಳಿಕೆಯನ್ನು ಉಲ್ಲೇಖಿಸಿವೆ.
ವೈದ್ಯರು ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದ್ದರಿಂದ ನವೆಂಬರ್ 1 ರಂದು ಅಲ್ಜೀರ್ಸ್‌ನಲ್ಲಿ ನಡೆಯಲಿರುವ ಅರಬ್ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ಯುವರಾಜ ಮೊಹಮ್ಮದ್ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Published On - 2:10 pm, Sun, 23 October 22