ಶಾಲೆಯಲ್ಲಿ ಮಧ್ಯಾಹ್ನ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಮೆಣಸಿನ ಪುಡಿ ಬೆರೆಸಿ ನೀಡಿರುವ ಘಟನೆ ತೆಲಂಗಾಣದ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಬಿಆರ್‌ಎಸ್ ನಾಯಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತೆಲಂಗಾಣ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರು ಕಾಂಗ್ರೆಸ್ ಸರ್ಕಾರವನ್ನು ಖಂಡಿಸಿದ್ದು, ಮೆಣಸಿನ ಪುಡಿಯೊಂದಿಗೆ ಅನ್ನಯನ್ನು ತಿನ್ನಲು ಮಕ್ಕಳಿಗೆ ಒತ್ತಾಯಿಸಲಾಗುತ್ತಿದೆ. ಕೆಸಿಆರ್ ಸರ್ಕಾರ ಶಾಲಾ ಮಕ್ಕಳಿಗೆ ಅದ್ಭುತವಾದ ಉಪಹಾರ ಯೋಜನೆಯನ್ನು ಜಾರಿಗೆ ತಂದಿದೆ, ಅದನ್ನು ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣವಿಲ್ಲದೆ ರದ್ದುಗೊಳಿಸಿದೆ.
ತೆಲಂಗಾಣ ಮಾಜಿ ಆರೋಗ್ಯ ಸಚಿವ ಹರೀಶ್ ರಾವ್ ಕೂಡ ಕಾಂಗ್ರೆಸ್ ಸರಕಾರವನ್ನು ಟೀಕಿಸಿದ್ದು, ಈ ಘಟನೆಯು ರೇವಂತ್ ರೆಡ್ಡಿ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಆಗಸ್ಟ್ 2 ರಂದು ಮಧ್ಯಾಹ್ನ ಊಟದ ಏಜೆನ್ಸಿಯು ವಿದ್ಯಾರ್ಥಿಗಳಿಗೆ ಮೆಣಸಿನ ಪುಡಿ ಮತ್ತು ಎಣ್ಣೆ ಮಿಶ್ರಿತ ಅನ್ನವನ್ನು ಬಡಿಸಿದ ಘಟನೆ ನಡೆದಿದೆ. ಮೆಣಸಿನ ಪುಡಿಯೊಂದಿಗೆ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ.
ಮತ್ತಷ್ಟು ಓದಿ: ಯಾದಗಿರಿ: ಬಿಸಿಯೂಟ ಸೇವಿಸಿ 48 ಮಕ್ಕಳು ಅಸ್ವಸ್ಥ, ಮೂವರ ಸ್ಥಿತಿ ಚಿಂತಾಜನಕ
ಹಲವಾರು ಪೋಷಕರು ತಮ್ಮ ಮಕ್ಕಳು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಮತ್ತು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಪೋಷಕರ ದೂರಿನ ಮೇರೆಗೆ ನಿಜಾಮಾಬಾದ್ ಡಿಇಒ ಎನ್ ದುರ್ಗಾಪ್ರಸಾದ್, ಮಂಡಲ ಶಿಕ್ಷಣಾಧಿಕಾರಿ (ಎಂಇಒ), ಕಾಂಪ್ಲೆಕ್ಸ್ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಇತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ವಿಷಯ ತಿಳಿದ ಜಿಲ್ಲಾ ಶಿಕ್ಷಣಾಧಿಕಾರಿಗಳು ಊಟದ ಸೇವೆ ನೀಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ಸೂಚಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ