ಸಾಮಾನ್ಯ ಜನರು ವಿಮಾನ ಹತ್ತಬೇಕೆಂಬ ಕನಸಿಗಾಗಿ ಶ್ರಮಿಸಿದ್ದ ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ
ದೇಶದ ಹಿರಿಯ ವಿಜ್ಞಾನಿ, ಪ್ರೊಫೆಸರ್ ರೊದ್ದಂ ನರಸಿಂಹ(87) ನಿಧನರಾಗಿದ್ದಾರೆ. ಮೆದುಳಿಗೆ ಸಂಬಂಧಿಸಿ ಕಾಯಿಲೆಯಿಂದ ಬಳಲುತ್ತಿದ್ದ ರೊದ್ದಂ ನರಸಿಂಹ ಕಳೆದೊಂದು ವಾರದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಿಸದೆ ರೊದ್ದಂ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು: ಮಿದುಳಿನ ರಕ್ತಸ್ರಾವದಿಂದಾಗಿ ಹಿರಿಯ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ (87) ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ (ಡಿ.14) ರಾತ್ರಿ 8.30ಕ್ಕೆ ನಿಧನರಾದರು. ಡಿ.8ರಂದು ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು (ಬ್ರೇನ್ ಹ್ಯಾಮರೇಜ್) ಪತ್ತೆಯಾಗಿತ್ತು.
ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹತ್ತಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರಗಳು ನರಸಿಂಹ ಅವರಿಗೆ ಸಂದಿವೆ. ಪತ್ನಿ ನೀಲಿಮಾ ಮತ್ತು ಪುತ್ರಿ ಮೈತ್ರೇಯಿ ಅವರನ್ನು ರೊದ್ದಂ ನರಸಿಂಹ ಅಗಲಿದ್ದಾರೆ.
ಕಲಬುರ್ಗಿ, ಮೈಸೂರು, ಶಿವಮೊಗ್ಗಗಳಂಥ ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣ ರೂಪಿಸುವ, ಮೇಲ್ದರ್ಜೆಗೇರಿಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯೂ ರೊದ್ದಂ ನರಸಿಂಹ ಅವರು ಕಂಡಿದ್ದ ದೊಡ್ಡ ಕನಸುಗಳ ಭಾಗವೇ ಹೌದಾಗಿತ್ತು.
ವಿಮಾನಯಾನ ಸಾಮಾನ್ಯ ಜನರ ಕೈಗೆಟುಕುವಂತೆ ಆಗಬೇಕು: ವಿಮಾನಯಾನ ಸಾಮಾನ್ಯ ಜನರ ಕೈಗೆಟುಕುವಂತೆ ಆಗಬೇಕು ಎಂಬ ಕನಸಿನ ಬೆನ್ನು ಹತ್ತಿದ ನರಸಿಂಹ ಅವರು ವಿಮಾನಗಳ ವಿನ್ಯಾಸದಲ್ಲಿ ಮಾರ್ಪಾಡಾದರೆ ಅವುಗಳ ಉತ್ಪಾದನಾ ವೆಚ್ಚ ಕಡಿಮೆಯಾಗಿ, ಪ್ರಯಾಣ ದರವೂ ಕಡಿಮೆಯಾಗಬಹುದು ಎಂದುಕೊಂಡಿದ್ದರು. ಇದಕ್ಕಾಗಿ ವಿಮಾನಗಳ ರಚನೆಯಲ್ಲಿ (ಏರೊಡೈನಮಿಕ್ಸ್) ಬದಲಾವಣೆ ತರಲು ಸಂಶೋಧನೆಗಳನ್ನು ನಡೆಸಿದರು. ವಿಮಾನ ರಚನೆ ಕುರಿತ ರೊದ್ದಂ ನರಸಿಂಹ ಅವರ ಸಂಶೋಧನೆಗೆ ಅಂತರರಾಷ್ಟ್ರೀಯ ಮಾನ್ಯತೆಯೂ ಸಿಕ್ಕಿತ್ತು.
ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಸುಭದ್ರ ತಳಪಾಯ ಹಾಕಿಕೊಟ್ಟ ವಿಜ್ಞಾನಿ ಸತೀಶ್ ಧವನ್ ಅವರ ಶಿಷ್ಯರೂ ಆಗಿದ್ದ ರೊದ್ದ ನರಸಿಂಹ, ದಿವಂಗತ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಒಡನಾಡಿಯೂ ಆಗಿದ್ದವರು. ಉಪಗ್ರಹಗಳನ್ನು ಹೊತ್ತೊಯ್ದು ಕಕ್ಷೆಗೆ ಸೇರಿಸುವ ರಾಕೆಟ್ ಎಂಜಿನ್‌ಗಳ ಸುಧಾರಣೆಯಲ್ಲಿಯೂ ರೊದ್ದಂ ನರಸಿಂಹ ಅವರ ಕೊಡುಗೆ ದೊಡ್ಡದು.
ಆಧುನಿಕ ರಾಕೆಟ್‌ಗಳ ಚಲನೆಗೆ ಮೂಲಾಧಾರವಾದ ದ್ರವ ಸಂಚಲನ (ಫ್ಲೂಯಿಡ್ ಡೈನಮಿಕ್ಸ್) ಮತ್ತು ಅವುಗಳ ಬಾಹ್ಯ ವಿನ್ಯಾಸದ ಬಗ್ಗೆ (ಏರೊಡೈನಮಿಕ್ಸ್) ರೊದ್ದಂ ನರಸಿಂಹ ಅವರು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದರು. ನೂರಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು. ಅವರ ಸಂಶೋಧನೆಗಳು ನಂತರದ ದಿನಗಳಲ್ಲಿ ಹಲವು ಪ್ರಾಯೋಗಿಕ ಬೆಳವಣಿಗೆಗಳ ಬುನಾದಿಯೂ ಆಗಿದ್ದವು. ಅವರು ದಾಖಲಿಸಿದ ಹೊಳಹುಗಳನ್ನು ಆಧರಿಸಿ ಸಾಕಷ್ಟು ಮಂದಿ ಈ ಪರಿಕಲ್ಪನೆಗಳನ್ನು ಸ್ವತಂತ್ರವಾಗಿ ಬೆಳೆಸಿದರು.
ಮೋಡಗಳ ಬಗ್ಗೆ ಆಳವಾದ ಸಂಶೋಧನೆ ಮಾಡಿದ್ದರು: ಮೋಡಗಳ ರಚನೆ, ಚಲನೆ ಮತ್ತು ಸ್ವಭಾವ ರೊದ್ದಂ ಅವರನ್ನು ಆಕರ್ಷಿಸಿದ್ದ ಮತ್ತೊಂದು ಮುಖ್ಯ ಸಂಶೋಧನಾ ಕ್ಷೇತ್ರ. ಕಳೆದ 15 ವರ್ಷಗಳಿಂದ ಮೋಡಗಳ ಬಗ್ಗೆ ಆಳವಾದ ಸಂಶೋಧನೆಗಳನ್ನು ನಡೆಸುತ್ತಿದ್ದರು.
ವೈಜ್ಞಾನಿಕ ಲೇಖನಗಳ ಹೆಸರಾಂತ ಬರಹಗಾರ ಆರ್.ಎಲ್.ನರಸಿಂಹಯ್ಯ ಅವರ ಪುತ್ರ ರೊದ್ದಂ ನರಸಿಂಹ ಜನಿಸಿದ್ದು 1933ರಲ್ಲಿ. ಅವರ ಹುಟ್ಟೂರು ಬೆಂಗಳೂರು. ಮೈಸೂರು ವಿವಿಯಿಂದ 1953ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science – IISC) 1955ರಲ್ಲಿ ವೈಮಾನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ (1962ರಿಂದ 1999), ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ (National Aerospase Laboratories – NAL) ನಿರ್ದೇಶಕರಾಗಿ, ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ (Jawaharlal Nehru Centre For Advanced Scientific Research – JNCASR) ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷರಾಗಿ ( 2000ರಿಂದ 2014) ಸೇವೆ ಸಲ್ಲಿಸಿದ್ದರು.
ಪ್ರಧಾನ ಮಂತ್ರಿಗೆ ವೈಜ್ಞಾನಿಕ ಸಲಹೆಗಳನ್ನು ನೀಡುವ ಸಲಹಾ ಮಂಡಳಿ ಸದಸ್ಯರಾಗಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ವಿಪ್ರೊ ಮತ್ತು ನಿಯಾಸ್ ಸಂಸ್ಥೆಗಳೂ ಇವರ ಸೇವೆಯನ್ನು ಪಡೆದುಕೊಂಡಿದ್ದವು. ಭಾರತೀಯ ತತ್ವಶಾಸ್ತ್ರ ಮತ್ತು ಪ್ರಾಚೀನ ಭಾರತದ ವಿಜ್ಞಾನದ ಬಗ್ಗೆಯೂ ತಲಸ್ಪರ್ಶಿ ಅಧ್ಯಯನವೂ ಅವರ ಸಾಧನೆಗಳಲ್ಲಿ ಒಂದು.
Death Note: ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Published On - 6:57 am, Tue, 15 December 20