
ಮುಂಬೈ, ಡಿಸೆಂಬರ್ 28: ಮಹಾರಾಷ್ಟ್ರದ ಮುಂಬೈನ (Mumbai) ಕೋರ್ಟ್ನಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರ ಮೇಲೆ ಅವರ ಹೆಂಡತಿ ಕೌಟುಂಬಿಕ ದೌರ್ಜನ್ಯದ ಕೇಸ್ ಹಾಕಿದ್ದಳು. ತನಗೆ ಗಂಡನಿಂದ ಆರ್ಥಿಕ ಪರಿಹಾರ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಳು. ಆದರೆ, ಆಕೆಯ ಗಂಡ ಆಕೆಯ 2ನೇ ಗಂಡನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬಂದ ನಂತರ ಈ ಪ್ರಕರಣದ ದಿಕ್ಕೇ ಬದಲಾಗಿದೆ.
ವರದಕ್ಷಿಣೆ ಆರೋಪದ ಮೇಲೆ ತನ್ನ ಪತಿ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿ, ವಿಚ್ಛೇದನದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿವಾಹದ ಸ್ವಲ್ಪ ಸಮಯದ ನಂತರ ನನ್ನ ಗಂಡ ನನ್ನನ್ನು ತೊರೆದು ಊರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ನೆಲೆಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಅಲ್ಲದೆ, ಆತ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದಳು. ನನ್ನ ಗಂಡ ನನ್ನ ಮತ್ತು ನನ್ನ ಮಗುವಿನ ಆರ್ಥಿಕ ಅಗತ್ಯಗಳನ್ನು ಪೂರೈಸಲಿಲ್ಲ, ಆದ್ದರಿಂದ ಆತನಿಂದ ಆರ್ಥಿಕ ಪರಿಹಾರವನ್ನು ಕೊಡಿಸಬೇಕೆಂದು ಕೋರಿದ್ದಳು.
ಇದನ್ನೂ ಓದಿ: Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್ಗೆ ಕುಡಿಯಲು ಹೋದ ಮಹಿಳೆ
ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಆ ಮಹಿಳೆ ತನ್ನ ತಂಗಿಯನ್ನು ಸಾಕ್ಷಿಯಾಗಿ ಹಾಜರುಪಡಿಸಿದಳು. ಈ ಮದುವೆಯಿಂದ ತನ್ನ ಅಕ್ಕ ಆಘಾತಕ್ಕೊಳಗಾಗಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದರು. ನ್ಯಾಯಾಲಯವು ಮೊದಲು ವಿಚಾರಣೆಯ ಸಮಯದಲ್ಲಿ ಮಧ್ಯಂತರ ಕ್ರಮವಾಗಿ ಆ ಮಹಿಳೆಗೆ ಮಾಸಿಕ ಭತ್ಯೆಯನ್ನು ಪಾವತಿಸಲು ಆಕೆಯ ಗಂಡನಿಗೆ ಸೂಚಿಸಿತ್ತು.
ಆದರೆ, ಇದಕ್ಕೆ ಒಪ್ಪದ ಆಕೆಯ ಮೊದಲ ಪತಿ, 2008ರಲ್ಲಿ ತಾವಿಬ್ಬರೂ ವಿಚ್ಛೇದನ ಪಡೆದಿದ್ದೇವೆ. ಆ ಮಹಿಳೆ ಸ್ವಂತ ಇಚ್ಛೆಯಂತೆ ನನ್ನನ್ನು ತೊರೆದು ಹೋಗಿದ್ದಾಳೆ. ನಾವಿಬ್ಬರೂ ಡೈವೋರ್ಸ್ ಪಡೆದ ನಂತರ ಆಕೆ ಈಗಾಗಲೇ ಬೇರೊಬ್ಬನನ್ನು ಮದುವೆಯಾಗಿರುವುದರಿಂದ ಆರ್ಥಿಕ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರೀತಿ ಇಷ್ಟೇನಾ? ಇಷ್ಟಪಟ್ಟು ಮದುವೆಯಾಗಿ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ
ಆಕೆಗೆ ಇನ್ನೊಂದು ಮದುವೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಆಕೆಯ ಮೊದಲ ಗಂಡ ಆಕೆಯ 2ನೇ ಗಂಡನನ್ನೇ ಸಾಕ್ಷಿಯಾಗಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಅವರು ತಾನು ಆ ಮಹಿಳೆಯನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡರು. ಈ ಸಾಕ್ಷ್ಯಗಳನ್ನು ಪರಿಗಣಿಸಿದ ನಂತರ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಎನ್. ಚಿಕ್ನೆ ಅವರು ಮಹಿಳೆ ಈಗಾಗಲೇ ಇನ್ನೊಬ್ಬ ಪುರುಷನನ್ನು ಮದುವೆಯಾಗಿದ್ದಾರೆ, ಆದ್ದರಿಂದ ಆಕೆಯ ವಿಚ್ಛೇದಿತ ಪತಿಯಿಂದ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ