ಜಮ್ಮು-ಕಾಶ್ಮೀರದ (Jammu Kashmir)ಪೂಂಚ್ ಜಿಲ್ಲೆಯಲ್ಲಿ, ಗಡಿ ನಿಯಂತ್ರಣ ರೇಖೆ ಬಳಿಯೇ ಇರುವ ನೂರ್ಕೋಟೆ ಹಳ್ಳಿಯಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದರು. ಭಯೋತ್ಪಾದಕರ ಈ ಅಡಗುತಾಣಗಳಲ್ಲಿ ಚೈನೀಸ್ ಪಿಸ್ತೂಲ್, ಎಕೆ 47 ರೈಫಲ್ಸ್, ವಿವಿಧ ಮಾದರಿಯ ಗನ್ಗಳು ಸೇರಿ ಹಲವು ಮಾರಕಾಸ್ತ್ರಗಳು ಇದ್ದವು ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಭಾನುವಾರ ಸಾಯಂಕಾಲ ಈ ದಾಳಿ ನಡೆದಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ತಡೆಗಟ್ಟಲು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ನಿನ್ನೆ ಬಂಡಿಪೋರಾ ಪೊಲೀಸರು ಎರಡು ಭಯೋತ್ಪಾದನಾ ಚಟುವಟಿಕೆ ಘಟಕಗಳ ಮೇಲೆ ದಾಳಿ ನಡೆಸಿ, ಲಷ್ಕರ್ ಇ ತೊಯಬಾ ಸಂಘಟನೆಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಬಂಡಿಪೋರಾದ ಅಷ್ಟಾಂಗೋ ಎಂಬ ಪ್ರದೇಶದಲ್ಲಿ ಪೊಲೀಸರು ಮೂವರನ್ನು ಮತ್ತು ರಾಖ್ ಹಾಜಿನ್ ಎಂಬಲ್ಲಿ ಇನ್ನೊಬ್ಬಾತನನ್ನು ಅರೆಸ್ಟ್ ಮಾಡಿದ್ದರು. ಇರ್ಫಾನ್ ಅಹ್ಮದ್ ಭಟ್, ಸಜದ್ ಅಹ್ಮದ್ ಮಿರ್, ಇರ್ಫಾನ್ ಅಹ್ಮದ್ ಜಾನ್ ಎಂಬುವರು ಅಷ್ಟಾಂಗೋದಲ್ಲಿ ಬಂಧಿತರಾದವರಾಗಿದ್ದು, ಇರ್ಫಾನ್ ಅಜೀಜ್ ಭಟ್ ರಾಖ್ ಹಾಜಿನ್ನಲ್ಲಿ ಅರೆಸ್ಟ್ ಆಗಿದ್ದಾನೆ. ಇವವರೆಲ್ಲ ಉಗ್ರರಿಗೆ ಸಾರಿಗೆ, ಸಂಪರ್ಕ ಮತ್ತಿತರ ವಿಚಾರಗಳಿಗೆ ನೆರವು ನೀಡುತ್ತಿದ್ದರು. ಇವರಿಂದಲೂ ಅಪಾರ ಪ್ರಮಾಣದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಏನೋ ಹೇಳಿದ ಎಂದು ಮಾರ್ಕೆಟ್ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್; ಮರುಕ್ಷಣವೇ ಅಮಾನತು
Published On - 9:57 am, Mon, 4 April 22