ಏನೋ ಹೇಳಿದ ಎಂದು ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್​; ಮರುಕ್ಷಣವೇ ಅಮಾನತು

ಏನೋ ಹೇಳಿದ ಎಂದು ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್​; ಮರುಕ್ಷಣವೇ ಅಮಾನತು
ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಹೊಡೆದ ಪೊಲೀಸ್​

ಅಪ್ರಾಪ್ತನಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಪೊಲೀಸ್​ ಅಧಿಕಾರಿ ವಿರುದ್ಧ ದೂರು ದಾಖಲಾಗಿತ್ತು. ಇದು ಅನುಚಿತ ವರ್ತನೆ ಎಂದು ಪರಿಗಣಿಸಿದ ಪೊಲೀಸ್​ ಉಪ ಆಯುಕ್ತರು ಶಕ್ತಿಸಿಂಹ್​ ಪರ್ವರನ್ನು ಅಮಾನತು ಮಾಡಿದ್ದಾರೆ.

TV9kannada Web Team

| Edited By: Lakshmi Hegde

Apr 04, 2022 | 9:48 AM

ಗುಜರಾತ್​​ನ ವಡೋದರಾ (Gujarat) ಮಾರುಕಟ್ಟೆಯಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬ 13 ವರ್ಷದ ಬಾಲಕನಿಗೆ ಬೆನ್ನಿಗೆ ಒದ್ದು, ಕಪಾಳಕ್ಕೆ ಹೊಡೆದಿದ್ದಾರೆ. ಎರಡು ಮೂರು ಸಲ ಬಾಲಕನ ಮೇಲೆ ಕೈ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸ್​ ಅಧಿಕಾರಿ ಅಮಾನತುಗೊಂಡಿದ್ದಾರೆ.  ಇದು ವಡೋದರಾದ ನಂದೇಸಾರಿ ಮಾರುಕಟ್ಟಯಲ್ಲಿ ಶನಿವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ನಡೆದ ಘಟನೆ.  ಪೊಲೀಸ್​ ಸಿಬ್ಬಂದಿಯನ್ನು ಶಕ್ತಿಸಿಂಹ್​ ಪರ್ವಾ ಎಂದು ಗುರುತಿಸಲಾಗಿದ್ದು, ಇವರು ಛನ್ನಿ ಪೊಲೀಸ್​ ಠಾಣೆಯ ಕಂಟ್ರೋಲ್​ ರೂಂನಲ್ಲಿ ಕರ್ತವ್ಯದಲ್ಲಿದ್ದಾರೆ.

ಪೊಲೀಸ್ ಅಧಿಕಾರಿ ಶಕ್ತಿಸಿಂಹ್​ ಪರ್ವ ತಮ್ಮ ವಾಹನದಲ್ಲಿ  ಇನ್ನೊಂದು ಪೊಲೀಸ್ ಸ್ಟೇಶನ್​ಗೆ ಹೋಗಿ ವಾಪಸ್​ ಬರುತ್ತಿದ್ದರು. ಮಾರುಕಟ್ಟೆ ಬಳಿ ಬರುತ್ತಿದ್ದಾಗ ಈ ಹುಡುಗ ಏನೋ ಹೇಳುತ್ತಿದ್ದ. ತನ್ನನ್ನು ನೋಡಿಯೇ ಆತ ಅದೇನೋ ತಮಾಷೆ ಮಾಡುತ್ತಿದ್ದಾನೆ ಎಂದು ಭಾವಿಸಿದ ಶಕ್ತಿಸಿಂಹ್​ ಪರ್ವ, ವಾಹನದಿಂದ ಇಳಿದುಬಂದರು. ಪೊಲೀಸ್​​​ ಅಧಿಕಾರಿಯನ್ನು ನೋಡಿ ಬಾಲಕ ಓಡಿ ಹೋಗಿ ಅದ್ಯಾವುದೋ ಅಂಗಡಿಯಲ್ಲಿ ಸೇರಿಕೊಂಡಿದ್ದ. ಆದರೆ ಬೆನ್ನಟ್ಟಿ ಹೋದ ಪರ್ವ ಅವನನ್ನು ಅಲ್ಲಿಂದ ಹೊರಗೆ ಒದೆಯುತ್ತಲೇ ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಕಪಾಳಕ್ಕೆ ಎರಡು ಏಟು ಹೊಡೆದಿದ್ದಾರೆ. ಬಳಿಯೇ ಅಲ್ಲಿದ್ದ ಕೆಲವರು ಬಂದು ಪೊಲೀಸ್ ಬಳಿ ವಿಚಾರಿಸಿದ್ದಾರೆ. ಇವೆಲ್ಲವೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪ್ರಾಪ್ತನಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಪೊಲೀಸ್​ ಅಧಿಕಾರಿ ವಿರುದ್ಧ ದೂರು ದಾಖಲಾಗಿತ್ತು. ಇದು ಅನುಚಿತ ವರ್ತನೆ ಎಂದು ಪರಿಗಣಿಸಿದ ಪೊಲೀಸ್​ ಉಪ ಆಯುಕ್ತರು ಶಕ್ತಿಸಿಂಹ್​ ಪರ್ವರನ್ನು ಅಮಾನತು ಮಾಡಿದ್ದಾರೆ. ಇಂಥ ಅನುಚಿತ ವರ್ತನೆಯನ್ನು ಯಾರೇ ತೋರಿಸಿದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಕ್ತಿಸಿಂಹ ಪರ್ವನನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?

Follow us on

Related Stories

Most Read Stories

Click on your DTH Provider to Add TV9 Kannada