ಯಾವುದು ದೇಶದ್ರೋಹ: ಐಪಿಸಿ 124ಎ ವಿಧಿ ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದ ಕೇಂದ್ರ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 09, 2022 | 5:52 PM

IPC 124A: ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆಯಲ್ಲಿರುವ ದೇಶದ್ರೋಹ ವಿವರಿಸುವ ವಿಧಿಯನ್ನು ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಯಾವುದು ದೇಶದ್ರೋಹ: ಐಪಿಸಿ 124ಎ ವಿಧಿ ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದ ಕೇಂದ್ರ ಸರ್ಕಾರ
ಸುಪ್ರೀಂಕೋರ್ಟ್
Follow us on

ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆಯ (Indian Penal Code – IPC) 124ಎ ವಿಧಿಯನ್ನು ಮರುಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ದೇಶದ್ರೋಹದ ಅಪರಾಧವನ್ನು ಐಪಿಸಿ 124ಎ ವಿಧಿಯು ವಿವರಿಸುತ್ತದೆ. ಎಸ್​.ಜಿ.ಒಂಬತ್​ಕೆರೆ vs ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಸತ್ಯಾಪನಾ ಪತ್ರದಲ್ಲಿ (ಅಫಿಡವಿಟ್) ಈ ಮಾಹಿತಿ ನೀಡಲಾಗಿದೆ. ವಸಾಹತುಶಾಹಿಯ ಕಾಲದಲ್ಲಿ ರೂಪುಗೊಂಡಿದ್ದ ಕಾನೂನುಗಳ ಹೊರೆಯಿಂದ ದೇಶವನ್ನು ಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರವು ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇದೇ ಚಿಂತನೆ ಹಂಚಿಕೊಂಡಿದ್ದಾರೆ. ದೇಶವು ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಇರುವಾಗಲೇ ವಸಾಹತುಶಾಹಿ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ದೇಶದ್ರೋಹ ಕಾಯ್ದೆಗೆ ಸಂಬಂಧಿಸಿದಂತೆ ಈವರೆಗೆ ವ್ಯಕ್ತವಾಗಿರುವ ದೃಷ್ಟಿಕೋನಗಳ ಬಗ್ಗೆ ಭಾರತ ಸರ್ಕಾರಕ್ಕೆ ಸಂಪೂರ್ಣ ಮಾಹಿತಿಯಿದೆ. ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಸಂರಕ್ಷಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ ಐಪಿಸಿ ಸೆಕ್ಷನ್ 124ಎ ವಿಧಿಯನ್ನು ಸಂಪೂರ್ಣ ಮರುಪರಿಶೀಲಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಅಫಿಡವಿಟ್ ತಿಳಿಸಿದೆ.

ದೇಶದ್ರೋಹ ಕಾನೂನು ಭಾರತ ಸರ್ಕಾರವೇ ಮರುಪರಿಶೀಲನೆಗೆ ಒಳಪಡಿಸಲು ಉದ್ದೇಶಿಸಿರುವುದರಿಂದ ಈ ಕಾನೂನಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಪರಿಶೀಲಿಸಲು ಈ ಹಂತದಲ್ಲಿ ಸುಪ್ರೀಂಕೋರ್ಟ್​ ಮುಂದಾಗುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರವು ಕೋರಿದೆ. ವಸಾಹತುಶಾಹಿ ಕಾಲದಲ್ಲಿ ಜಾರಿಯಾಗಿದ್ದ ಕಾನೂನಿನ ಔಚಿತ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಅಫಿಡವಿಟ್ ಮೂಲಕ ಸ್ಪಷ್ಟಪಡಿಸಿದೆ.

‘ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದ ನಂತರವೂ ದೇಶದ್ರೋಹ ಕಾಯ್ದೆ ಅಗತ್ಯವಿದೆಯೇ’ ಎಂದು ಜುಲೈ 2021ರಲ್ಲಿ ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಈ ವಿಚಾರದಲ್ಲಿ ಅಟಾರ್ನಿ ಜನರಲ್ ಅವರ ನೆರವನ್ನು ಸುಪ್ರೀಂಕೋರ್ಟ್ ಕೋರಿತ್ತು. ಈ ವಿಚಾರವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಬೇಡವೇ ಎನ್ನುವ ಬಗ್ಗೆ ಸುಪ್ರೀಂಕೋರ್ಟ್​ ಚಿಂತನೆ ಆರಂಭಿಸಿತ್ತು. 1962ರ ಕೇದಾರ್ ನಾಥ್ ಸಿಂಗ್ vs ಸ್ಟೇಟ್ ಆಫ್ ಬಿಹಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು ದೇಶದ್ರೋಹ ಕಾಯ್ದೆ ಸಂವಿಧಾನ ಮಾನ್ಯತೆಯನ್ನು ಎತ್ತಿಹಿಡಿದಿತ್ತು.

ಪ್ರಸ್ತುತ ಸುಪ್ರೀಂಕೋರ್ಟ್​ನ ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: Sedition Law: ದೇಶದ್ರೋಹದ ಕಾನೂನು ರದ್ದತಿ ಸಲ್ಲದು, ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರದ ಮನವಿ

ಇದನ್ನೂ ಓದಿ: Sedition Law: ದೇಶದ್ರೋಹ ಕಾನೂನಿಗೆ ಸವಾಲು; ಉತ್ತರ ನೀಡಲು ಕೋರ್ಟ್​ ಬಳಿ 1 ವಾರ ಸಮಯಾವಕಾಶ ಕೋರಿದ ಕೇಂದ್ರ ಸರ್ಕಾರ