Sedition Law: ದೇಶದ್ರೋಹದ ಕಾನೂನು ರದ್ದತಿ ಸಲ್ಲದು, ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರದ ಮನವಿ

Sedition Law: ದೇಶದ್ರೋಹದ ಕಾನೂನು ರದ್ದತಿ ಸಲ್ಲದು, ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರದ ಮನವಿ
ಸುಪ್ರೀಂಕೋರ್ಟ್

ದೇಶದ್ರೋಹದ ಕಾನೂನು ರದ್ದುಪಡಿಸುವ ಬದಲು ಎಂಥ ಸಂದರ್ಭದಲ್ಲಿ ಈ ಕಾನೂನು ಬಳಸುವಂತಿಲ್ಲ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 05, 2022 | 2:31 PM

ದೆಹಲಿ: ದೇಶದ್ರೋಹದ ಕಾನೂನು ರದ್ದುಪಡಿಸುವ ಬದಲು ಎಂಥ ಸಂದರ್ಭದಲ್ಲಿ ಈ ಕಾನೂನು ಬಳಸುವಂತಿಲ್ಲ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಬೇಕು. ಒಂದು ಕಾನೂನು ಸರಿಯಾಗಿದೆ, ಆದರೆ ಅದನ್ನು ಸಮರ್ಪಕ ರೀತಿಯಲ್ಲಿ ಬಳಸುತ್ತಿಲ್ಲ ಎನ್ನುವ ಕಾರಣಕ್ಕೆ ಅದು ಅಮಾನ್ಯಗೊಳ್ಳುವುದಿಲ್ಲ. ನೀವು ಸರಿಯಾಗಿ ಬಳಸುತ್ತಿದ್ದೀರಿ ಎಂದಾಕ್ಷಣ ಯಾವುದೇ ಅಸಾಂವಿಧಾನಿಕ ಕಾನೂನಿಗೆ ಮಾನ್ಯತೆ ಸಿಗುವುದಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದರು. ಮಹಾರಾಷ್ಟ್ರದ ಹನುಮಾನ್ ಚಾಲೀಸ ಬೆಳವಣಿಗೆ ಉದಾಹರಿಸಿದ ಅವರು, ಅತ್ಯಂತ ಕಡಿಮೆ ಪ್ರಮಾಣದ ಭಿನ್ನಮತವನ್ನೂ ದೇಶದ್ರೋಹದ ಆರೋಪ ಹೊರಿಸಿ ಹತ್ತಿಕ್ಕಲಾಗುತ್ತಿದೆ ಎಂದರು.

ಸುಪ್ರೀಂಕೋರ್ಟ್ ಕುರಿತು ಮತ್ತಷ್ಟು ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ

ಭಾರತೀಯ ದಂಡ ಸಂಹಿತೆಯ (Indian Penal Code – IPC) 124ಎ ಪರಿಚ್ಛೇದದಲ್ಲಿರುವ ದೇಶದ್ರೋಹದ ವಿವರಣೆಯನ್ನು ಪ್ರಶ್ನಿಸಿ ಎಡಿಟರ್ಸ್ ಗಿಲ್ಡ್ ಮತ್ತು ನಿವೃತ್ತ ಮೇಜರ್ ಜನರಲ್ ಎಸ್​.ಜಿ.ಒಂಬತ್​ಕೆರೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು. ದೇಶದ್ರೋಹ ಕಾನೂನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಕದ ತಟ್ಟಿರುವವರಲ್ಲಿ ಬಿಜೆಪಿಯ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಪತ್ರಕರ್ತರಾದ ಕಿಶೋರ್​ಚಂದ್ರ ವಾಂಘೆಮ್​ಚಾ (ಮಣಿಪುರ) ಮತ್ತು ಕನ್ಹಯ್ಯಲಾಲ್ ಶುಕ್ಲ (ಚಂಡಿಗಡ) ಇದ್ದಾರೆ. ಸರ್ಕಾರದ ವಿರುದ್ಧ ವ್ಯಕ್ತಪಡಿಸುವ ಭಿನ್ನಮತವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧದಡಿ ಬಂಧಿತರಾದವರಿಗೆ ಜಾಮೀನು ಸಿಗುವುದಿಲ್ಲ. ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

‘ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಪ್ರೀಂಕೋರ್ಟ್​ ದೇಶದ್ರೋಹದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿತ್ತು. ಬ್ರಿಟಿಷರು ಮಹಾತ್ಮಾ ಗಾಂಧಿಯಂಥ ಹೋರಾಟಗಾರರನ್ನು ಹತ್ತಿಕ್ಕಲು, ಸ್ವಾತಂತ್ರ್ಯ ಹೋರಾಟಕ್ಕೆ ಕಡಿವಾಣ ಹಾಕಲು ಬಳಸಿದ ಕಾಯ್ದೆಯನ್ನು ಈಗಿನ ಸರ್ಕಾರವೂ ಏಕೆ ಬಳಸಬೇಕು? ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ನಂತರವೂ ಇಂಥ ವಸಾಹತುಶಾಹಿ ಕಾನೂನು ಇರಬೇಕೆ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಗುರುವಾರ (ಮೇ 5) ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ಕೋರಿದರು. ಈ ಬಗ್ಗೆ ಸರ್ಕಾರ ಪರಿಶೀಲಿಸಿ, ತನ್ನ ಸ್ಪಷ್ಟ ನಿಲುವು ತಿಳಿಸಲಿ ಎಂದು ತುಷಾರ್ ಮೆಹ್ತಾ ಅವರಿಗೆ ಸಮಯ ನೀಡಲು ಕೋರ್ಟ್ ಒಪ್ಪಿಕೊಂಡಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ವಾದ ಮಂಡಿಸಿದರು. ಈ ವಿಚಾರ ಏಳು ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠದ ಎದುರು ಇದೆ ಎಂಬ ಸಂಗತಿಯನ್ನು ಅವರು ಗಮನಕ್ಕೆ ತಂದರು. ಕೇಂದ್ರ ಸರ್ಕಾರವು ಸೋಮವಾರದ ಒಳಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು. ವಿಸ್ತೃತ ನ್ಯಾಯಪೀಠದ ಎದುರು ಎಲ್ಲ ಅರ್ಜಿದಾರರು ತಮ್ಮ ಮನವಿಗಳನ್ನು ಶನಿವಾರದ ಒಳಗೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ (ಮೇ 10) ಮುಂದೂಡಿತು. ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರೊಂದಿಗೆ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು.

ಇದನ್ನೂ ಓದಿ: ಲಸಿಕೆ ಪಡೆಯುವಂತೆ ಯಾರಿಗೂ ಒತ್ತಾಯ ಮಾಡುವಂತಿಲ್ಲ: ಸುಪ್ರೀಂಕೋರ್ಟ್​ ಆದೇಶ

ಇದನ್ನೂ ಓದಿ: Acid Attack: ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ -ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?

Follow us on

Related Stories

Most Read Stories

Click on your DTH Provider to Add TV9 Kannada