ರಾಜಸ್ಥಾನದಲ್ಲಿ ವೈದ್ಯರ ಎಡವಟ್ಟು; ಮಗನ ಬದಲಿಗೆ ಪಾರ್ಶ್ವವಾಯು ಪೀಡಿತ ತಂದೆಗೆ ಆಪರೇಷನ್!
ರಾಜಸ್ಥಾನದಲ್ಲಿ ಮನೀಶ್ ಎಂಬ ವ್ಯಕ್ತಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಆಪರೇಷನ್ ಮಾಡಬೇಕಾಗಿತ್ತು. ಆದರೆ, ಆತನ ಬದಲಿಗೆ ಆತನ ಪಾರ್ಶ್ವವಾಯು ಪೀಡಿತ ತಂದೆಗೆ ವೈದ್ಯರು ಆಪರೇಷನ್ ಮಾಡಿದ್ದಾರೆ. ಆತ ತನ್ನ ತಂದೆಯ ದೇಹದ ಮೇಲೆ ಹೊಲಿಗೆಗಳನ್ನು ಗಮನಿಸಿದ ನಂತರ ತನ್ನ ತಂದೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಕಂಡುಕೊಂಡಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಕೆಲವೇ ದಿನಗಳಲ್ಲಿ ವರದಿಯನ್ನು ನೀಡುವ ಭರವಸೆ ನೀಡಿದೆ. ಈ ಘಟನೆಯು ಆಸ್ಪತ್ರೆಯಲ್ಲಿ ರೋಗಿಯ ಗುರುತಿನ ಪ್ರೋಟೋಕಾಲ್‌ಗಳು ಮತ್ತು ಶಸ್ತ್ರಚಿಕಿತ್ಸಾ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಸೃಷ್ಟಿಸಿದೆ.

ಜೈಪುರ, ಏಪ್ರಿಲ್ 17: ರಾಜಸ್ಥಾನದ (Rajasthan) ಕೋಟಾ ವೈದ್ಯಕೀಯ ಕಾಲೇಜಿನ ವೈದ್ಯರು ದೊಡ್ಡ ಎಡವಟ್ಟು ಮಾಡಿ ಸುದ್ದಿಯಲ್ಲಿದ್ದಾರೆ. ಈ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಪಘಾತಕ್ಕೊಳಗಾದ ವ್ಯಕ್ತಿಯ ಪಾರ್ಶ್ವವಾಯು ಪೀಡಿತ ತಂದೆಗೆ ವೈದ್ಯರು ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ನಿಜವಾದ ರೋಗಿ ಮನೀಶ್ ಅಪಘಾತಕ್ಕೀಡಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ಗಾಯಗಳಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ಶನಿವಾರ ನಡೆಯಬೇಕಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಆಸ್ಪತ್ರೆಯಲ್ಲಿ ಅವರು ಸಹಾಯಕ್ಕಾಗಿ ತನ್ನ ತಂದೆಗೆ ಕರೆ ಮಾಡಿದ್ದರು. ಆಪರೇಷನ್ ಮಾಡುವಾಗ ಸಹಾಯಕ್ಕಾಗಿ ಯಾರಾದರೂ ಬೇಕೆಂದು ಅವರು ಫೋನ್ ಮಾಡಿದ್ದರು. ಪಾರ್ಶ್ವವಾಯು ಪೀಡಿತರಾಗಿದ್ದ ಆತನ ತಂದೆ ಆಸ್ಪತ್ರೆಗೆ ಬಂದಿದ್ದರು.
ಆಪರೇಷನ್ ಥಿಯೇಟರ್ ಒಳಗೆ ಶಸ್ತ್ರಚಿಕಿತ್ಸೆಗೆ ಸಿದ್ಧವಾಗುತ್ತಿರುವಾಗ ತನ್ನ ತಂದೆ ಹೊರಗೆ ಕಾಯುತ್ತಿದ್ದರು ಎಂದು ಮನೀಶ್ ಹೇಳಿಕೊಂಡಿದ್ದಾರೆ. ಆದರೆ, ನಾನು ಹೊರಬಂದ ನಂತರ, ತನ್ನ ತಂದೆಯ ದೇಹದ ಮೇಲೆ 5-6 ಹೊಲಿಗೆಗಳನ್ನು ನೋಡಿದೆ. ತನ್ನ ತಂದೆಗೆ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ನನಗೆ ಗೊತ್ತಾಯಿತು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ವೇಳೆ ಹೊಟ್ಟೆಯಲ್ಲಿ ಹತ್ತಿ ಬಿಟ್ಟ ವೈದ್ಯರು; ಆಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು
“ನಾನು ಶಸ್ತ್ರಚಿಕಿತ್ಸೆಯ ಕೊಠಡಿಯೊಳಗೆ ಇದ್ದೆ. ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಈಗ ನನ್ನ ತಂದೆಗೆ 5–6 ಹೊಲಿಗೆಗಳನ್ನು ಹಾಕಲಾಗಿದೆ” ಎಂದು ಮನೀಶ್ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಹೆಸರು ತನಗೆ ನೆನಪಿಲ್ಲ ಎಂದು ರೋಗಿಯು ಉಲ್ಲೇಖಿಸಿದ್ದಾರೆ.
ಕೋಟಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಸಂಗೀತಾ ಸಕ್ಸೇನಾ ಅವರು ಈ ಘಟನೆಯ ಬಗ್ಗೆ ಗಮನ ಹರಿಸಿ, ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. “ನಾನು ಸೂಪರಿಂಟೆಂಡೆಂಟ್ ಅವರನ್ನು ಸಮಿತಿ ರಚಿಸಿ 2-3 ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೇಳಿದ್ದೇನೆ. ಅವರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಅವರು ವಿಚಾರಿಸಿ ಏನಾಯಿತು ಎಂದು ತಿಳಿಸುತ್ತಾರೆ” ಎಂದು ಅವರು ANIಗೆ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ