ಲಸಿಕೆ ಪಡೆಯುವಂತೆ ಯಾರಿಗೂ ಒತ್ತಾಯ ಮಾಡುವಂತಿಲ್ಲ: ಸುಪ್ರೀಂಕೋರ್ಟ್ ಆದೇಶ
ಕೊವಿಡ್ ನಿಯಂತ್ರಣಕ್ಕೆ ಇದೀಗ ಸರ್ಕಾರ ಅನುಸರಿಸುತ್ತಿರುವ ಕ್ರಮವನ್ನು ಸಾರ್ವಕಾಲಿಕಗೊಳಿಸಲು ಆಗುವುದಿಲ್ಲ. ಕಾನೂನಿನ ಪ್ರಕಾರ ವ್ಯಕ್ತಿಗತ ಹಕ್ಕುಗಳನ್ನು ನಾವು ಗೌರವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತು.
ದೆಹಲಿ: ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ (ಮೇ 2) ಹೇಳಿದೆ. ‘ಕೊವಿಡ್ ನಿಯಂತ್ರಣಕ್ಕೆ ಇದೀಗ ಸರ್ಕಾರ ಅನುಸರಿಸುತ್ತಿರುವ ಕ್ರಮವನ್ನು ಸಾರ್ವಕಾಲಿಕಗೊಳಿಸಲು ಆಗುವುದಿಲ್ಲ. ಕಾನೂನಿನ ಪ್ರಕಾರ ವ್ಯಕ್ತಿಗತ ಹಕ್ಕುಗಳನ್ನು ನಾವು ಗೌರವಿಸಬೇಕಾಗುತ್ತದೆ. ಲಸಿಕೆ ಪಡೆಯಲೇಬೇಕೆಂದು ಯಾರನ್ನೂ ಒತ್ತಾಯಿಸಲು ಆಗುವುದಿಲ್ಲ. ಸಮುದಾಯ ಆರೋಗ್ಯ ಕಾಪಾಡುವ ಉದ್ದೇಶದಿಂದ ವ್ಯಕ್ತಿಗತ ಹಕ್ಕುಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು. ಸಾರ್ವಜನಿಕ ಸ್ಥಳಗಳನ್ನು ಬಳಸಲು ಅವಕಾಶ ಸಿಗಬೇಕೆಂದರೆ ಕೊವಿಡ್ ಲಸಿಕೆ ಪಡೆದುಕೊಂಡಿರಲೇಬೇಕು ಎಂಬ ನಿಯಮಗಳನ್ನು ಕೆಲ ರಾಜ್ಯ ಸರ್ಕಾರಗಳು ವಿಧಿಸಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಈ ನಿರ್ಬಂಧಗಳನ್ನು ‘ಅನಿವಾರ್ಯ’ ಎಂದು ಸಮರ್ಥಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿತು.
‘ಸೋಂಕಿತರ ಸಂಖ್ಯೆ ಕಡಿಮೆ ಇರುವವರೆಗೂ ವ್ಯಕ್ತಿಗತವಾಗಿ ಯಾವುದೇ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು, ಸೇವೆಗಳನ್ನು ಪಡೆಯಲು ಮತ್ತು ಸಂಪನ್ಮೂಲಗಳನ್ನು ಬಳಸುವ ವಿಚಾರದಲ್ಲಿ ಎಲ್ಲ ಸಂದರ್ಭದಲ್ಲಿಯೂ ತಾರತಮ್ಯ ಸಲ್ಲದು. ಒಂದು ವೇಳೆ ಇಂಥ ನಿಯಮಗಳು ಜಾರಿಯಲ್ಲಿದ್ದರೆ ರದ್ದುಪಡಿಸಿ’ ಎಂದು ಕೋರ್ಟ್ ಸೂಚಿಸಿದೆ.
‘ನಮ್ಮ ಸೂಚನೆಯು ಕೇವಲ ಲಸಿಕಾಕರಣಕ್ಕೆ ಮಾತ್ರವೇ ಸಂಬಂಧಿಸಿರುತ್ತದೆ. ಕೊವಿಡ್ ಶಿಷ್ಟಾಚಾರಗಳಿಗೂ ನಮ್ಮ ಸೂಚನೆಗಳಿಗೂ ಯಾವುದೇ ಸಂಬಂಧವಿಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು. ಲಸಿಕೆಗಳನ್ನು ಪಡೆದ ನಂತರ ಸಾರ್ವಜನಿಕರು ಮತ್ತು ವೈದ್ಯರು ಅನುಭವಿಸಿದ ತೊಂದರೆಗಳ ಬಗ್ಗೆಯೂ ವರದಿಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವ ವ್ಯವಸ್ಥೆಯಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು. ಮಕ್ಕಳಿಗೆ ಲಸಿಕೆ ಹಾಕಿಸುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತಜ್ಞರ ಅಭಿಪ್ರಾಯಕ್ಕೆ ವ್ಯತಿರಿಕ್ತವಾದುದನ್ನು ನಾವು ಹೇಳುವುದಿಲ್ಲ. ಜಾಗತಿಕ ಶಿಷ್ಟಾಚಾರಗಳನ್ನು ನಾವೂ ಅನುಸರಿಸಬೇಕಾಗುತ್ತದೆ. ಆದರೆ ಲಸಿಕೆ ಪಡೆದವರಲ್ಲಿ ಯಾವುದಾದರೂ ತೊಂದರೆ ಕಂಡುಬಂದಿದ್ದರೆ ಆ ಮಾಹಿತಿಯನ್ನು ಸರ್ಕಾರ ಮುಚ್ಚಿಡಬಾರದು ಎಂದು ಹೇಳಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಎನ್.ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ಲಸಿಕೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮೇಲಿನಂತೆ ಸೂಚನೆ ನೀಡಿತು. ‘ಯಾವುದೇ ಸೇವೆ ಬಳಸಿಕೊಳ್ಳಲು ಲಸಿಕಾಕರಣವನ್ನು ಕಡ್ಡಾಯಗೊಳಿಸುವುದರಿಂದ ನಾಗರಿಕ ಹಕ್ಕುಗಳು ಉಲ್ಲಂಘನೆಯಾಗುತ್ತವೆ’ ಎಂದು ಅರ್ಜಿದಾರರು ವಾದಿಸಿದ್ದರು.
ಲಸಿಕೆಗಳ ಟ್ರಯಲ್ಗೆ ಸಂಬಂಧಿಸಿದ ಎಲ್ಲ ಮಾಹಿತಿ ಈಗಾಗಲೇ ಸಾರ್ವಜನಿಕ ಪರಿಶೀಲನೆಗೆ ಲಭ್ಯವಿದೆ ಎಂದು ಲಸಿಕಾ ತಯಾರಿಕಾ ಕಂಪನಿಗಳಾದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಮಾಹಿತಿ ನೀಡಿದವು. ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಲಸಿಕೆ ಕಡ್ಡಾಯಗೊಳಿಸಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡವು. ಸಾರ್ವಜನಿಕ ಸಾರಿಗೆ ಬಳಸುವವರಿಗೆ ಲಸಿಕಾಕರಣ ಅನಿವಾರ್ಯ ಎಂದು ಸ್ಪಷ್ಟಪಡಿಸಿದವು.
ಇದನ್ನೂ ಓದಿ: Covovax: ಭಾರತದ 12-17 ವರ್ಷದ ಮಕ್ಕಳಿಗೆ ಸೆರಂ ಇನ್ಸ್ಟಿಟ್ಯೂಟ್ನ ಕೋವೊವ್ಯಾಕ್ಸ್ ಲಸಿಕೆ ನೀಡಲು ಅನುಮತಿ
ಇದನ್ನೂ ಓದಿ: ಕೊರೊನಾ ಲಸಿಕೆ 2ನೇ ಡೋಸ್ಗೂ-3ನೇ ಡೋಸ್ಗೂ ನಡುವಿನ ಅವಧಿ 6ತಿಂಗಳಿಗೆ ಇಳಿಯುವ ಸಾಧ್ಯತೆ; ಶೀಘ್ರವೇ ಕೇಂದ್ರದಿಂದ ನಿರ್ಧಾರ