Breaking News: ಪಳನಿಸ್ವಾಮಿಗೆ ಭಾರೀ ಹಿನ್ನಡೆ; ಹೊಸದಾಗಿ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಸಲು ಹೈಕೋರ್ಟ್ ಆದೇಶ
Tamil Nadu Politics: AIADMK ಪಕ್ಷದಲ್ಲಿ ಹೊಸದಾಗಿ ಜನರಲ್ ಕೌನ್ಸಿಲ್ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಓ. ಪನ್ನೀರ್ ಸೆಲ್ವಂ ಪರ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ಪಳನಿಸ್ವಾಮಿಗೆ ಹಿನ್ನಡೆಯಾಗಿದೆ.
ಚೆನ್ನೈ: ಜುಲೈ 11ರಂದು ಸಾಮಾನ್ಯ ಮಂಡಳಿ ಸಭೆ ನಡೆಸಿ ಎಡಪ್ಪಾಡಿ ಕೆ. ಪಳನಿಸ್ವಾಮಿ (K Palaniswamy) ಅವರನ್ನು ಎಐಎಡಿಎಂಕೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಸಭೆಯನ್ನು ಮದ್ರಾಸ್ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಎಐಎಡಿಎಂಕೆ (AIADMK) ಪಕ್ಷದಲ್ಲಿ ಹೊಸದಾಗಿ ಜನರಲ್ ಕೌನ್ಸಿಲ್ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸಿದೆ. ಜುಲೈ 11ರಂದು ಜನರಲ್ ಕೌನ್ಸಿಲ್ ಸಭೆ ನಡೆಯುವ ಮೊದಲು ಯಾವ ಪರಿಸ್ಥಿತಿಯಿತ್ತೋ ಅದನ್ನೇ ಮುಂದುವರೆಸಲು ನ್ಯಾಯಾಲಯ ಆದೇಶ ನೀಡಿದೆ. ಜನರಲ್ ಕೌನ್ಸಿಲ್ ಸಭೆ ಕರೆಯುವ ಅಧಿಕಾರ ಸಂಯೋಜಕರು ಮತ್ತು ಜಂಟಿ ಸಂಯೋಜಕರಿಗೆ ಮಾತ್ರ ಇದೆ ಎಂದು ನ್ಯಾಯಾಲಯ ಘೋಷಿಸಿದೆ.
ಜುಲೈ 11ರಂದು ನಡೆದ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆ ಮತ್ತು ಪಕ್ಷದಿಂದ ತನ್ನನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತಮಿಳುನಾಡು ಮಾಜಿ ಸಿಎಂ ಓ ಪನೀರ್ ಸೆಲ್ವಂ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರ ಪೀಠವು ಇಂದು ವಿಚಾರಣೆ ನಡೆಸಿದೆ. ಈ ವೇಳೆ ಪನೀರ್ ಸೆಲ್ವಂ ಅವರನ್ನು ಉಚ್ಛಾಟನೆ ಮಾಡಿರುವ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ. ಅಲ್ಲದೆ, ಜುಲೈನಲ್ಲಿ ನಡೆದ ಜನರಲ್ ಕೌನ್ಸಿಲ್ ಸಭೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಇದನ್ನೂ ಓದಿ: AIADMK Tussle: ಎಐಎಡಿಎಂಕೆ ಸಂಘರ್ಷ; ಇಪಿಎಸ್ ಈಗ ಹೊಸ ಬಾಸ್, ಪನ್ನೀರ್ಸೆಲ್ವಂ ಉಚ್ಛಾಟನೆ
ಈ ಹಿಂದೆ, ಒಪಿಎಸ್ ಅವರ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಲು ಮತ್ತು ಮೂರು ವಾರಗಳಲ್ಲಿ ಆದೇಶಗಳನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ವಾದಗಳ ಸಂದರ್ಭದಲ್ಲಿ, ಸಂಯೋಜಕರು ಮತ್ತು ಜಂಟಿ ಸಂಯೋಜಕರ ಅನುಮೋದನೆಯಿಲ್ಲದೆ ಯಾವುದೇ ಸಭೆಯನ್ನು ಕರೆಯುವಂತಿಲ್ಲ ಎಂದು ಒಪಿಎಸ್ ಕಡೆಯವರು ಪ್ರತಿಪಾದಿಸಿದರು. ಒಪಿಎಸ್ ಅವರನ್ನು 1.5 ಕೋಟಿ ಪ್ರಾಥಮಿಕ ಸದಸ್ಯರಿಂದ ಪಕ್ಷದ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಹಾಗಾಗಿ, ಕೇವಲ 2,665 ಸದಸ್ಯರನ್ನು ಒಳಗೊಂಡಿರುವ ಜನರಲ್ ಕೌನ್ಸಿಲ್ ಸಭೆ ತೆಗೆದುಕೊಂಡ ನಿರ್ಧಾರದಿಂದ ಅವರನ್ನು ಆ ಸ್ಥಾನದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸಹ ವಾದಿಸಲಾಯಿತು.
Madras High Court cancels #AIADMK General Council meeting held on July 11; orders convening of a fresh General Council meeting.
The July 11 meeting had elected Edappadi K Palaniswami as the interim general secretary@DeccanHerald
— Sivapriyan E.T.B | சிவப்பிரியன் ஏ.தி.ப (@sivaetb) August 17, 2022
2,500ಕ್ಕೂ ಹೆಚ್ಚು ಎಐಎಡಿಎಂಕೆ ಪಕ್ಷದ ಸದಸ್ಯರು ವಿನಂತಿಸಿದ ನಂತರ ಜೂನ್ 23ರ ಜನರಲ್ ಕೌನ್ಸಿಲ್ ಸಭೆಯಲ್ಲಿ ಜುಲೈ 11ರಂದು ಜನರಲ್ ಕೌನ್ಸಿಲ್ ಸಭೆಯನ್ನು ಕರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇಪಿಎಸ್ ಪಕ್ಷವು ಪ್ರತಿಪಾದಿಸಿದೆ.
ಜುಲೈ 11ರಂದು ಸಭೆ ಕರೆಯುವ ಪ್ರಕಟಣೆಯನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಸಾರ ಮಾಡಲಾಗಿದ್ದು, ಅದನ್ನು ನೋಟಿಸ್ ಎಂದು ಪರಿಗಣಿಸಬಹುದು ಎಂದು ಸಹ ವಾದಿಸಲಾಯಿತು. ಸಭೆ ಕರೆಯಲು 15 ದಿನಗಳ ಕಾಲಾವಕಾಶದ ಅಗತ್ಯವಿದ್ದರೂ ಪಕ್ಷದ 5ನೇ 1 ಭಾಗದಷ್ಟು ಸದಸ್ಯರು ಸಭೆಯನ್ನು ಕೋರಿದಾಗ ಅದೇ ಅಗತ್ಯವಿರಲಿಲ್ಲ. ಹೀಗಾಗಿ, ಜುಲೈ 11ರಂದು ನಡೆದ ಸಾಮಾನ್ಯ ಸಭೆಯನ್ನು ನಿಯಮಾನುಸಾರ ಕ್ರಮಬದ್ಧವಾಗಿ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಒಪಿಎಸ್ ಪರ ಹಿರಿಯ ವಕೀಲರಾದ ಗುರು ಕೃಷ್ಣಕುಮಾರ್, ಪಿಎಚ್ ಅರವಿಂದ್ ಪಾಂಡಿಯನ್ ಮತ್ತು ಎಕೆ ಶ್ರೀರಾಮ್ ವಾದ ಮಂಡಿಸಿದರೆ, ಇಪಿಎಸ್ ಪರ ಹಿರಿಯ ವಕೀಲ ವಿಜಯ್ ನಾರಾಯಣ್, ಎಸ್ ಆರ್ ರಾಜಗೋಪಾಲ್ ಮತ್ತು ನರ್ಮದಾ ಸಂಪತ್ ವಾದ ಮಂಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Wed, 17 August 22