ಅಯೋಧ್ಯೆಯಲ್ಲಿ ಮಸೀದಿ ಬಳಿ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ, ಮಾಂಸ ಎಸೆದಿದ್ದ 7 ಮಂದಿ ಅರೆಸ್ಟ್ !
ದಂಗೆ ಎಬ್ಬಿಸುವ ಸಲುವಾಗಿ ಈ ಗುಂಪು ಹೀಗೆ ಮಾಡಿತ್ತು. ಮಧ್ಯ ರಾತ್ರಿ 2ಗಂಟೆ ಹೊತ್ತಿಗೆ ಸುಮಾರು ಎಂಟು ಜನ ಬೈಕ್ನಲ್ಲಿ ವಿವಿಧ ಮಸೀದಿಗಳ ಬಳಿ ಹೋಗಿ ಅಲ್ಲಿ ಪೋಸ್ಟರ್ ಅಂಟಿಸಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಮಸೀದಿಗಳ ಬಳಿ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ, ಮಸೀದಿಗೆ ಮಾಂಸದ ತುಂಡನ್ನು ಎಸೆದಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೇ ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆದಿದೆ. ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಐಜಿ ಕೆ.ಪಿ.ಸಿಂಗ್ ಮತ್ತು ಎಸ್ಎಸ್ಪಿ ಶೈಲೇಶ್ ಪಾಂಡೆ, ದೆಹಲಿಯ ಜಹಂಗೀರ್ಪುರಿಯಲ್ಲಿ ಹನುಮಾನ್ ಜಯಂತಿಯಂದು ನಡೆದ ಹಿಂಸಾಚಾರ, ಗಲಭೆಯಿಂದ ಸಿಟ್ಟಾಗಿದ್ದ ಗುಂಪೊಂದು ಈ ಕೃತ್ಯ ನಡೆಸಿದೆ. ಪ್ರಕರಣ ನಡೆದ 24ಗಂಟೆಯಲ್ಲಿ, ಸಿಸಿಟಿವಿ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಮಸೀದಿ ಬಳಿ ಪೋಸ್ಟರ್ ಅಂಟಿಸಲು ಮುಸ್ಲಿಂ ಟೋಪಿಗಳನ್ನು ಹಾಕಿ ಬಂದಿದ್ದರು ಎಂದು ಹೇಳಿದ್ದಾರೆ.
ದಂಗೆ ಎಬ್ಬಿಸುವ ಸಲುವಾಗಿ ಈ ಗುಂಪು ಹೀಗೆ ಮಾಡಿತ್ತು. ಮಧ್ಯ ರಾತ್ರಿ 2ಗಂಟೆ ಹೊತ್ತಿಗೆ ಸುಮಾರು ಎಂಟು ಜನ ಬೈಕ್ನಲ್ಲಿ ವಿವಿಧ ಮಸೀದಿಗಳ ಬಳಿ ಹೋಗಿ ಅಲ್ಲಿ ಪೋಸ್ಟರ್ ಅಂಟಿಸಿದ್ದಾರೆ. ಕೆಲವನ್ನು ಅಲ್ಲಿಯೇ ಬಿಸಾಕಿದ್ದರು. ಅಷ್ಟೇ ಅಲ್ಲ, ಮಾಂಸವನ್ನೂ ಎಸೆದಿದ್ದಾರೆ. ಅಯೋಧ್ಯೆಯಲ್ಲಿರುವ ಕಾಶ್ಮೀರಿ ಮೊಹಲ್ಲಾ, ಟಾಟಾ ಶಾ ಮಸೀದಿ, ಈದ್ಗಾ ಸಿವಿಲ್ ಲೈನ್ ಸೇರಿ ಹಲವು ಮಸೀದಿಗಳ ಬಳಿ ಪೋಸ್ಟರ್ಗಳು ಕಂಡುಬಂದಿದ್ದವು. ಅದರಲ್ಲಿ ಆ ಧರ್ಮದ ಬಗ್ಗೆ ಅವಹೇಳನಕಾರಿ ಸಾಲುಗಳನ್ನು ಬರೆಯಲಾಗಿತ್ತು. ನಮ್ಮ ಗಮನಕ್ಕೆ ಬರುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡಿದ್ದಲ್ಲದೆ, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ ತಂಡವನ್ನು ರಚಿಸಲಾಗಿತ್ತು. ಒಟ್ಟು ಏಳು ಜನರನ್ನು ಸೆರೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಅಂದಹಾಗೇ, ಆರೋಪಿಗಳೆಲ್ಲರೂ ಅಯೋಧ್ಯೆಯವರೇ ಆಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾಗ್ಯೂ ಪೊಲೀಸರು ಮಾಹಿತಿ ನೀಡಿದ್ದಾರೆ.