ಮಹಾರಾಷ್ಟ್ರದಲ್ಲಿ ಭಾಷಾ ಕಿಡಿ; ಎಂಎನ್ಎಸ್ನಿಂದ ಇಂದು ಮೆರವಣಿಗೆ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸ್
Several MNS workers detained at Thane, Maharashtra: ಭಾಷಾ ವಿವಾದ ಸಂಬಂಧ ಇಂದು ಥಾಣೆ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲು ಉದ್ದೇಶಿಸಿರುವ ಎಂಎನ್ಎಸ್ ಸಂಘಟನೆಯ ಹಲವು ಕಾರ್ಯಕರ್ತರನ್ನು ಪೊಲೀಸರ್ ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮುಂಜಾವು ಎಂಎನ್ಎಸ್ ಮುಖಂಡ ಅವಿನಾಶ್ ಜಾಧವ್ ಅವರನ್ನು ಅವರ ಮನೆಯಲ್ಲೇ ಡೀಟೇನ್ ಮಾಡಲಾಗಿದೆ. ಮರಾಠಿ ಭಾಷೆ ಮಾತನಾಡದಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಎಂಎನ್ಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಮರಾಠಿಯೇತರ ವರ್ತಕರು ಇದನ್ನು ಪ್ರತಿಭಟಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಎನ್ಎಸ್ನಿಂದ ಪ್ರತ್ಯೇಕ ಮೆರವಣಿಗೆ ಆಯೋಜಿಸಲಾಗಿದೆ.

ಮುಂಬೈ, ಜುಲೈ 8: ರಾಜ್ ಥಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (MNS – Maharashtra Nava Nirman Sena) ಸಂಘಟನೆಯ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ಧಾರೆ. ಮರಾಠಿಯೇತರರ ಪ್ರತಿಭಟನೆಗೆ (Non Marathi traders protest) ಪ್ರತಿಯಾಗಿ ಮೆರವಣಿಗೆ ನಡೆಸಲು ಥಾಣೆ ನಗರದ ಮೀರಾ ರೋಡ್ನಲ್ಲಿ ಸೇರಿದ್ದ ಎಂಎನ್ಎಸ್ ಕಾರ್ಯಕರ್ತರನ್ನು ತಡೆಯಲಾಗಿದೆ. ಮೆರವಣಿಗೆಗೆ ಅನುಮತಿ ಪಡೆಯಲಾಗಿಲ್ಲದಿರುವುದರಿಂದ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಯಾಕೆ ಈ ಮೆರವಣಿಗೆ?
ಮರಾಠಿ ಭಾಷೆ ಮಾತನಾಡದೇ ಇದ್ದದ್ದಕ್ಕೆ ಹೋಟೆಲ್ ಮಾಲೀಕರೊಬ್ಬರನ್ನು ಎಂಎನ್ಎಸ್ ಕಾರ್ಯಕರ್ತರು ಥಳಿಸಿದ್ದರು. ಅದನ್ನು ವಿರೋಧಿಸಿ ಮರಾಠಿಯೇತರ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಮೊದಲಾದ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ಆದರೆ, ಈ ಮೆರವಣಿಗೆಗೆ ಅನುಮತಿ ಪಡೆಯಲಾಗಿಲ್ಲ ಎನ್ನುವುದು ಆಡಳಿತದ ಹೇಳಿಕೆ.
ಇದನ್ನೂ ಓದಿ: ಮುಂಬೈ ದಾಳಿ ವೇಳೆ ನಿಮ್ಮ ಯೋಧರು ಎಲ್ಲಿದ್ದರು?; ರಾಜ್ ಠಾಕ್ರೆಗೆ ಮಾಜಿ ಕಮಾಂಡೋ ಪ್ರವೀಣ್ ಟಿಯೋಟಿಯಾ ತರಾಟೆ
ಎಂಎನ್ಎಸ್ನ ಥಾಣೆ ಮತ್ತು ಪಾಲ್ಘರ್ ವಿಭಾಗದ ಮುಖ್ಯಸ್ಥ ಅವಿನಾಶ್ ಜಾಧವ್ ಅವರನ್ನು ಇಂದು ಮಂಗಳವಾರ ಮುಂಜಾವು 3:30ಕ್ಕೆ ಅವರ ನಿವಾಸದಿಂದಲೇ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮರಾಠಿಯೇತರರು ಹೆಚ್ಚಾಗಿ ನೆಲಸಿರುವ ಮೀರಾ ರೋಡ್ನಿಂದಲೇ ಎಂಎನ್ಎಸ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೀರಾ ರೋಡ್ನಲ್ಲಿ ಸೇರಿದ್ದ ಹಲವು ಕಾರ್ಯಕರ್ತರನ್ನು ಪೊಲೀಸರು ಡೀಟೇನ್ ಮಾಡಿಕೊಂಡಿದ್ದಾರೆ.
ಪರಿಸ್ಥಿತಿ ಅತಿರೇಕಕ್ಕೆ ಹೋಗುವುದರಿಂದ ತಡೆಯಲು ಪೊಲೀಸರು ಮುನ್ನೆಚ್ಚರಿಕೆಯಾಗಿ ಈ ಕ್ರಮ ಜರುಗಿಸಿದ್ದಾರೆ. ಪೊಲೀಸರ ಕ್ರಮವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ನಿಂದ ದೇಶಾದ್ಯಂತ 58,964 ಮಂಡಲಗಳಲ್ಲಿ ಹಿಂದೂ ಸಮ್ಮೇಳನ ಆಯೋಜನೆ
‘ಮಹಾರಾಷ್ಟ್ರದಲ್ಲಿ ಯಾವುದೇ ಸಂಘಟನೆಯೂ ಪ್ರತಿಭಟನೆ ನಡೆಸುವ ಹಕ್ಕು ಹೊಂದಿರುತ್ತದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು. ಟ್ರಾಫಿಕ್ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆಯ ಮಾರ್ಗವನ್ನು ಸರಿಯಾಗಿ ಯೋಜಿಸಬೇಕು’ ಎಂದು ಸಿಎಂ ಫಡ್ನವಿಸ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




