ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ; ಮತ್ತೆ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್

ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ, ಸಂಜಯ್ ಗಾಂಧಿಯ ಕುರಿತಾದ ಲೇಖನವನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೊಮ್ಮೆ ಕಾಂಗ್ರೆಸ್‌ನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ. ಈ ಹಿಂದೆ ಕೂಡ ಪತ್ರಿಕೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಮೂಲಕ ಶಶಿ ತರೂರ್ ಕಾಂಗ್ರೆಸ್ ನಾಯಕರ ಟೀಕೆಗೆ ಗುರಿಯಾಗಿದ್ದರು. ಇದೀಗ ಪತ್ರಿಕೆಯೊಂದರಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯ ಆಡಳಿತವನ್ನು ಟೀಕಿಸುವ ಮೂಲಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ; ಮತ್ತೆ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್
Shashi Tharoor

Updated on: Jul 10, 2025 | 4:16 PM

ನವದೆಹಲಿ, ಜುಲೈ 10: ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ನೆಹರು-ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ತುರ್ತು ಪರಿಸ್ಥಿತಿಯ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ತಮ್ಮ ಪಕ್ಷದೊಳಗೆ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಇತ್ತೀಚೆಗೆ ಪ್ರಕಟವಾದ ಶಶಿ ತರೂರ್ ಅವರ ಲೇಖನವು ವೈರಲ್ ಆಗಿದೆ. ಇದರಲ್ಲಿ ಶಶಿ ತರೂರ್ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ “ಕರಾಳ ಅಧ್ಯಾಯ” ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನಡೆದ ಚಿತ್ರಹಿಂಸೆ, ದೌರ್ಜನ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ವಿಧಾನವು ಸಾರ್ವಜನಿಕ ಜೀವನವನ್ನು ಭಯದ ಸ್ಥಿತಿಗೆ ತಳ್ಳಿತು. ಆದರೆ, ಇಂದಿನ ಭಾರತವು 1975ರ ಭಾರತವಲ್ಲ ಎಂದು ಒತ್ತಿ ಹೇಳುವ ಮೂಲಕ ಮತ್ತೊಮ್ಮೆ ಪರೋಕ್ಷವಾಗಿ ಶಶಿ ತರೂರ್ ಬಿಜೆಪಿ ಆಡಳಿತವನ್ನು ಹೊಗಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಠಿಣ ಕ್ರಮಗಳನ್ನು ಜಾರಿಗೆ ತಂದರು. ಅವರ ಮಗ ಸಂಜಯ್ ಗಾಂಧಿ ಗ್ರಾಮೀಣ ಪ್ರದೇಶಗಳಲ್ಲಿ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಹಿಂಸಾಚಾರ ಸೇರಿದಂತೆ ಭಯಾನಕ ದೌರ್ಜನ್ಯಗಳನ್ನು ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ

ಆಪರೇಷನ್ ಸಿಂಧೂರ್ ಬಳಿಕ ಬಿಜೆಪಿ ಸರ್ಕಾರದ ಪರವಾಗಿ ಹಲವು ಬಾರಿ ಹೇಳಿಕೆಗಳನ್ನು ನೀಡುತ್ತಿರುವ ತಿರುವನಂತಪುರಂ ಸಂಸದ ಶಶಿ ತರೂರ್ ವಿರುದ್ಧ ಕಾಂಗ್ರೆಸ್​​ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಹಿರಿಯ ನಾಯಕರೇ ಬೇರೆ ಪಕ್ಷದ ಪರವಾಗಿ ಹೇಳಿಕೆ ನೀಡಿದರೆ ಅದು ಕಾರ್ಯಕರ್ತರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಅದರ ನಡುವೆ ಇದೀಗ ಶಶಿ ತರೂರ್ ಕಾಂಗ್ರೆಸ್​ನ ಬಹಳ ಜನಪ್ರಿಯ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತವನ್ನು ಬಹಿರಂಗವಾಗಿಯೇ ಟೀಕಿಸುವ ಮೂಲಕ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

“50 ವರ್ಷಗಳ ನಂತರವೂ ತುರ್ತು ಪರಿಸ್ಥಿತಿಯ ಅವಧಿಯು ಭಾರತೀಯರ ನೆನಪುಗಳಲ್ಲಿ ಅಳಿಸಲಾಗದಂತೆ ಕೆತ್ತಲ್ಪಟ್ಟಿದೆ” ಎಂದು ಶಶಿ ತರೂರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಆ ಅವಧಿಯು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಖಾತರಿಗಳನ್ನು ತೀವ್ರವಾಗಿ ಪರೀಕ್ಷಿಸಿದೆ ಎಂದು ಅವರು ಟೀಕಿಸಿದ್ದಾರೆ.


ಇದೇ ವೇಳೆ ಇಂದಿರಾ ಗಾಂಧಿಯ ಮಗ ಸಂಜಯ್ ಗಾಂಧಿಯವರನ್ನು ಉಲ್ಲೇಖಿಸುತ್ತಾ ಶಶಿ ತರೂರ್, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯವರ ಕ್ರಮಗಳನ್ನು “ವಿವರಿಸಲಾಗದ ಕ್ರೌರ್ಯದ ಕೃತ್ಯಗಳು” ಎಂದು ಕರೆದಿದ್ದಾರೆ. ಸಂಜಯ್ ನೇತೃತ್ವದ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆಯ ಅಭಿಯಾನಗಳನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಭಾಗಗಳಲ್ಲಿ ಚಿತ್ರಹಿಂಸೆಯ ಮೂಲಕ ಸಂತಾನಹರಣ ನಡೆಸಲಾಯಿತು ಎಂದಿದ್ದಾರೆ.

ಇದನ್ನೂ ಓದಿ: ಸ್ವತಂತ್ರ ಹಕ್ಕಿಯೂ ಆಕಾಶ ನೋಡಲೇಬೇಕು; ಶಶಿ ತರೂರ್ ನಿಗೂಢ ಪೋಸ್ಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ

“ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ನಾನು ಭಾರತದಲ್ಲಿಯೇ ಇದ್ದೆ. ಆದರೆ, ನಾನು ಅದಾದ ಸ್ವಲ್ಪ ಸಮಯದಲ್ಲೇ ಅಮೆರಿಕಕ್ಕೆ ಪದವಿ ಅಧ್ಯಯನಕ್ಕಾಗಿ ಹೊರಟೆ. ಉಳಿದದ್ದನ್ನು ದೂರದಿಂದಲೇ ಗಮನಿಸಿದೆ. ಆ ವೇಳೆ ನ್ಯಾಯಾಂಗವು ತುರ್ತು ಪರಿಸ್ಥಿತಿಯ ಕ್ರಮವನ್ನು ಬೆಂಬಲಿಸಲು ಅಪಾರ ಒತ್ತಡಕ್ಕೆ ಒಳಗಾಯಿತು. ಸುಪ್ರೀಂ ಕೋರ್ಟ್ ಹೇಬಿಯಸ್ ಕಾರ್ಪಸ್ ಮತ್ತು ನಾಗರಿಕರ ಮೂಲಭೂತ ಸ್ವಾತಂತ್ರ್ಯದ ಹಕ್ಕನ್ನು ಅಮಾನತುಗೊಳಿಸುವುದನ್ನು ಎತ್ತಿಹಿಡಿಯಿತು. ಪತ್ರಕರ್ತರು, ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಜೈಲಿನಲ್ಲಿದ್ದರು. ಆ ಸಮಯದಲ್ಲಿ ಆಡಳಿತವನ್ನು ಧಿಕ್ಕರಿಸಲು ಧೈರ್ಯ ಮಾಡಿದವರಿಗೆ ಕರಾಳ ಶಿಕ್ಷೆ ಎದುರಾಗುತ್ತಿತ್ತು” ಎಂದು ಶಶಿ ತರೂರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ