ನಾವು ಪ್ರತಿಸ್ಪರ್ಧಿಗಳಲ್ಲ, ನಮ್ಮ ನಡುವೆ ಇರುವುದು ಸೌಹಾರ್ದ ಸ್ಪರ್ಧೆ: ಶಶಿ ತರೂರ್
ಇಂದು ಮಧ್ಯಾಹ್ನ ಮಧ್ಯಾಹ್ನ ದಿಗ್ವಿಜಯ ಸಿಂಗ್ ನನ್ನನ್ನು ಭೇಟಿಯಾದರು. ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಪೈಪೋಟಿಯಲ್ಲ...
ದೆಹಲಿ: ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ದಿಗ್ವಜಯ ಸಿಂಗ್ (Digvijaya Singh)ಅವರ ನಿರ್ಧಾರವನ್ನು ಶಶಿ ತರೂರ್ (Shashi Tharoor) ಸ್ವಾಗತಿಸಿದ್ದಾರೆ. ಶಶಿ ತರೂರ್ ಕೂಡಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇಂದು ದಿಗ್ವಜಯ ಸಿಂಗ್ ತರೂರ್ ಅವರನ್ನು ಭೇಟಿ ಮಾಡಿದ್ದಾರೆ. ಸಿಂಗ್ ಜತೆಗಿರುವ ಫೋಟೊ ಶೇರ್ ಮಾಡಿದ ತಿರುವನಂತಪುರಂ ಸಂಸದ ತರೂರ್, ನಾವು ಇಬ್ಬರೂ ಪ್ರತಿಸ್ಪರ್ಧಿಗಳಲ್ಲ. ನಮ್ಮಿಬ್ಬರಲ್ಲಿ ಯಾರೇ ಗೆದ್ದರೂ ಅದು ಕಾಂಗ್ರೆಸ್ ಪಕ್ಷದ ಗೆಲುವು ಆಗಿರುತ್ತದೆ ಎಂದಿದ್ದಾರೆ. ಇಂದು ಮಧ್ಯಾಹ್ನ ಮಧ್ಯಾಹ್ನ ದಿಗ್ವಿಜಯ ಸಿಂಗ್ ನನ್ನನ್ನು ಭೇಟಿಯಾದರು. ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮದು ಪ್ರತಿಸ್ಪರ್ಧಿಗಳ ನಡುವಿನ ಪೈಪೋಟಿಯಲ್ಲ ಆದರೆ ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಎಂದು ನಾವಿಬ್ಬರೂ ಒಪ್ಪಿಕೊಂಡೆವು. ಯಾರೇ ಮೇಲುಗೈ ಸಾಧಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಚುನಾವಣೆಗೆ ಸ್ಪರ್ಧಿಸುವುದಾಗಿ ಖಚಿತ ಪಡಿಸಿದ್ದು ಕೇಂದ್ರ ಚುನಾವಣಾ ಅಧಿಕಾರಿಗಳಿಂದ ನಾಮಪತ್ರ ಪಡೆದುಕೊಂಡಿದ್ದರು. ತರೂರ್ ಮತ್ತು ಸಿಂಗ್ ನಾಳೆ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ನಾನು ನನ್ನನ್ನೇ ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳಿರುವ ಸಿಂಗ್ ನಾಳೆ ಬೆಳಗ್ಗೆ 11-3ಗಂಟೆಯ ಒಳಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಶಾಸಕರ ಬಂಡಾಯದಿಂದ ಉಂಟಾದ ಭಾರೀ ಆಂತರಿಕ ಸಂಘರ್ಷದ ನಡುವೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ನಂತರ ಸದ್ಯ ಇಬ್ಬರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಖಾಡದಲ್ಲಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ ಆಗಿ ಉಳಿಯುತ್ತಾರೋ ಇಲ್ಲವೋ?; ಇನ್ನೆರಡು ದಿನಗಳಲ್ಲಿ ನಿರ್ಧಾರ
ಸೋನಿಯಾ ಗಾಂಧಿಯವರ ಕ್ಷಮೆಯಾಚಿಸುವ ಮೂಲಕ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಇದಾದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್, ಗೆಹ್ಲೋಟ್ ರಾಜಸ್ಥಾನ ಸಿಎಂ ಸ್ಥಾನದಲ್ಲಿ ಉಳಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಸೋನಿಯಾ ಗಾಂಧಿ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಭಾನುವಾರದ ಘಟನೆ ಬಗ್ಗೆ ತಾನು ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿರುವುದಾಗಿ ಗೆಹ್ಲೋಟ್ ಹೇಳಿದ್ದಾರೆ. ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೇನ್ , ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದ ಸಭೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಬಹಿರಂಗ ಬಂಡಾಯವೆದ್ದಿದ್ದರು. ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ರಾಜಸ್ಥಾನ ಸಿಎಂ ಸ್ಥಾನಕ್ಕೆ ಸಚಿನ್ ಪೈಲಟ್ ಬರಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರಾಜಸ್ಥಾನದಲ್ಲಿ 90ಕ್ಕೂ ಹೆಚ್ಚು ಶಾಸಕರು ಭಾನುವಾರ ರಾಜೀನಾಮೆ ಬೆದರಿಕೆ ಒಡ್ಡಿದ್ದರು. ಆದಾಗ್ಯೂ,ಗೆಹ್ಲೋಟ್ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಕೇಳಿದಾಗ ಆ ಬಗ್ಗೆ ನಿರ್ಧಾರ ಸೋನಿಯಾ ಗಾಂಧಿ ಅವರದ್ದು ಎಂದು ವೇಣುಗೋಪಾಲ್ ಹೇಳಿದ್ದಾರೆ.
Published On - 7:55 pm, Thu, 29 September 22