ತಾಲಿಬಾನ್ ಮತ್ತು ಆರ್ ಎಸ್ ಎಸ್ ವಿಚಾರಧಾರೆ ಒಂದೇ ಎಂದ ಅಖ್ತರ್ ಅವರನ್ನು ಖಂಡಿಸಿದ ಶಿವ ಸೇನಾ

ಸಾಮ್ನಾದ ಸಂಪಾದಕೀಯದಲ್ಲಿ ಅಖ್ತರ್ ಹೇಳಿಕೆಯನ್ನು ಖಂಡಿಸಿರುವ ಶಿವ ಸೇನಾ, ಗೋಮಾಂಸ ವಿಷಯಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಯಾವತ್ತೂ ಧಾರ್ಮಿಕ ಅತಿರೇಕತನವನ್ನು ಪ್ರದರ್ಶಿಸಿಲ್ಲ. ಹಿಂದೂತ್ವದ ಹೆಸರಲ್ಲಿ ಯಾವುದೇ ರೀತಿಯ ಅತಿರೇಕವನ್ನು ಅಂಗೀಕರಿಸಲಾಗದು ಎಂದು ಹೇಳಿದೆ.

ತಾಲಿಬಾನ್ ಮತ್ತು ಆರ್ ಎಸ್ ಎಸ್ ವಿಚಾರಧಾರೆ ಒಂದೇ ಎಂದ ಅಖ್ತರ್ ಅವರನ್ನು ಖಂಡಿಸಿದ ಶಿವ ಸೇನಾ
ಜಾವೆದ್​ ಅಖ್ತರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2021 | 4:46 PM

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್​ಗೆ ಹೋಲಿಸಿರುವ ಕಟುವಾಗ ಟೀಕಿಸಿರುವ ಶಿವ ಸೇನಾ ಆರ್ ಎಸ್ ಎಸ್ ಅನ್ನು ಸಮರ್ಥಿಸಿಕೊಂಡಿದೆ. ಆರ್ ಎಸ್ ಎಸ್ ಮತ್ತು ತಾಲಿಬಾನ್ ನಡುವೆ ಹೋಲಿಕೆ ಮಾಡುವ ಮೂಲಕ ಆಖ್ತರ್ ಅವರು ಬಹು ದೊಡ್ಡ ಪ್ರಮಾದವೆಸಗಿದ್ದಾರೆ ಎಂದು ಶಿವ ಸೇನಾ ಹೇಳಿದೆ. ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಅಖ್ತರ್ ಹೇಳಿಕೆಯನ್ನು ಖಂಡಿಸಿರುವ ಶಿವ ಸೇನಾ, ಗೋಮಾಂಸ ವಿಷಯಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಯಾವತ್ತೂ ಧಾರ್ಮಿಕ ಅತಿರೇಕತನವನ್ನು ಪ್ರದರ್ಶಿಸಿಲ್ಲ. ಹಿಂದೂತ್ವದ ಹೆಸರಲ್ಲಿ ಯಾವುದೇ ರೀತಿಯ ಅತಿರೇಕವನ್ನು ಅಂಗೀಕರಿಸಲಾಗದು ಮತ್ತು ಶಿವ ಸೇನಾ ಅಗಲೀ ಆಥವಾ ಆರ್ ಎಸ್ ಎಸ್ ಆಗಲೀ ಅದಕ್ಕೆ ಉತ್ತೇಜನ ನೀಡುವುದಿಲ್ಲ ಎಂದು ಹೇಳಿದೆ.

‘ಹಿಂದುತ್ವದ ಹೆಸರಲ್ಲಿ ನಾವು ಹುಚ್ಚಾಟವನ್ನು ಅಂಗೀಕರಿಸುವುದಿಲ್ಲ. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಬೆಂಬಲಿಸುವವರು, ತಾಲಿಬಾನ್ ರೀತಿಯ ವಿಚಾರಧಾರೆಯನ್ನು ಹೊಂದಿದ್ದಾರೆ ಎಂದು ಹೇಗೆ ಹೇಳುತ್ತ್ತೀರಿ? ಇಂಥ ವಾದವನ್ನು ಒಪ್ಪುವುದು ಸಾಧ್ಯವೇ ಇಲ್ಲ,’ ಎದು ಶಿವ ಸೇನಾ ಹೇಳಿದೆ.

ಪಾಕಿಸ್ತಾನ ಮತ್ತು ಚೀನಾದಂಥ ದೇಶಗಳು ತಾಲಿಬಾನನ್ನು ಬೆಂಬಲಿಸಿವೆ. ಯಾಕೆಂದರೆ ಈ ದೇಶಗಳಲ್ಲಿ ಮಾನವ ಹಕ್ಕು, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳಿಗೆ ಬೆಲೆಯೇ ಇಲ್ಲ. ಆದರೆ ಭಾರತದ ವಿಚಾರಧಾರೆ ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ದವಾಗಿದೆ. ನಾವು ಎಲ್ಲ ರೀತಿಯಲ್ಲೂ ಸಹಿಷ್ಣುಗಳಾಗಿದ್ದೇವೆ,’ ಎಂದು ಶಿವ ಸೇನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಪ್ರಜಾಪ್ರಭುತ್ವದ ಸೋಗಿನಲ್ಲಿ ಕೆಲವರು ಸರ್ವಾಧಿಕಾರ ನಡೆಸಲು ಪ್ರಯತ್ನಿಸುತ್ತಿರಬಹುದು. ಆದರೂ ಅವರು ಲಿಮಿಟ್​ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮತ್ತು ತಾಲಿಬಾನ್ ಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ.’

‘ಪ್ರತಿಬಾರಿ ರಾಜದ್ರೋಹ ಮತ್ತು ಧಾರ್ಮಿಕ ಅತಿರೇಕತ ಭಾರತದಲ್ಲಿ ತಲೆ ಎತ್ತಿದಾಗ ಜಾವೆದ್ ಆಖ್ತರ್ ಅವರು ಅಂಥ ಮೂಲಭೂತವಾದಿಗಳ ಮುಖವಾಡವನ್ನು ಕಿತ್ತೊಗೆಯಲು ಪ್ರಯತ್ನಿಸಿದ್ದಾರೆ. ಮೂಲಭೂತವಾದಿಗಳ ಜೀವ ಬೆದರಿಕೆಯ ಹೊರತಾಗಿಯೂ ಅವರು ‘ವಂದೇ ಮಾತರಂ’ ಹಾಡಿದ್ದಾರೆ. ಹಾಗಂತ ಅವರು ತಾಲಿಬಾನ್ ಮತ್ತು ಆರ್ ಎಸ್ ಎಸ್-ಎರಡನ್ನು ಹೋಲಿಸಿ ಮಾತಾಡುವುದನ್ನು ನಾವು ಸಮ್ಮತಿಸುವುದಿಲ್ಲ,’ ಎಂದು ಶಿವ ಸೇನಾ ಹೇಳಿದೆ.

‘ನಮ್ಮದು ಹಿಂದೂ ಮೆಜಾರಿಟಿಯ ದೇಶವಾದರೂ ಇಲ್ಲಿ ಜಾತ್ಯಾತೀತದ ಧ್ವಜ ಹಾರಾಡುತ್ತದೆ. ಮೆಜಾರಿಟಿ ಹಿಂದೂಗಳು ಸತತವಾಗಿ ಶೋಷಣೆಗೆ ಒಳಗಾಗಬಾರದು ಅಂತ ನಿರೀಕ್ಷಿಸುವುದು ತಪ್ಪಲ್ಲ. ಜಾವೆದ್ ಅಖ್ತರ್ ಅವರೇ, ನಾವು ಹೇಳುತ್ತಿರುವುದು ಸರಿ ತಾನೆ?’ ಎಂದು ಸಂಪಾದಕೀಯದಲ್ಲಿ ಶಿವ ಸೇನಾ ಕೇಳಿದೆ.

ಕಳೆದ ವಾರ ಎನ್ಡಿಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅಖ್ತರ್ ಅವರು, ಆರ್ ಎಸ್ ಎಸ್ ಮತ್ತು ತಾಲಿಬಾನ್ ನಡುವೆ ಸಮಾನಾಂತರ ಗೆರೆಯನ್ನು ಎಳೆದು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವವರು ಮತ್ತು ತಾಲಿಬಾನ್ ನಡುವೆ ವ್ಯತ್ಯಾಸವೇನೂ ಇಲ್ಲ ಎಂದಿದ್ದರು.

‘ತಾಲಿಬಾನಿಗಳು ಇಸ್ಲಾಮಿಕ್ ರಾಷ್ಟ್ರ ಬೇಕು ಅಂತ ಹೇಳುವ ಹಾಗೆಯೇ, ಹಿಂದೂ ರಾಷ್ಟ್ರ ಆಗಬೇಕೆಂದು ಹೇಳುವವರೂ ಇಲ್ಲಿದ್ದಾರೆ. ಹಾಗೆ ಯೋಚನೆ ಮಾಡುವವರು ಮುಸ್ಲಿಮರೇ ಆಗಿರಲಿ, ಕ್ರಿಶ್ಚಿಯನ್, ಹಿಂದೂ ಅಥವಾ ಯಹೂದಿ-ಅವರ ವಿಚಾರಧಾರೆ ತಾಲಿಬಾನಿಗಳ ವಿಚಾರಧಾರೆಯನ್ನು ಹೋಲುತ್ತದೆ,’ ಎಂದು ಅಖ್ತರ್ ಹೇಳಿದ್ದರು.

ಅಖ್ತರ್ ಅವರ ಕಾಮೆಂಟ್​ಗೆ ಕೂಡಲೇ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರು, ಸಾಹಿತಿಯ ಕಾಮೆಂಟ್ ಮನಸ್ಸಿಗೆ ನೋವುಂಟು ಮಾಡುವ ಮತ್ತು ಅವಮಾನಕಾರಿ ಎಂದು ಹೇಳಿದ್ದು, ಅಖ್ತರ್ ಕ್ಷಮೆ ಯಾಚಿಸದವರೆಗೆ ಅವರ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ, ಎಂದಿದ್ದಾರೆ.

ಇದನ್ನೂ ಓದಿ:  ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ