ಅರ್ಜೆಂಟ್ ಆಗಿ ಚುನಾವಣೆ ನಿಗದಿಪಡಿಸಿ; ಪೆಟ್ರೋಲ್ ​ಬೆಲೆ ಏರಿಕೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದ ಪ್ರಿಯಾಂಕಾ ಚತುರ್ವೇದಿ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಚುನಾವಣೆಗೂ, ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ರಷ್ಯಾ-ಉಕ್ರೇನ್​ ಯುದ್ಧ ಶುರುವಾಗಿ ತಿಂಗಳ ಮೇಲಾಯಿತು. ಜಾಗತಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಅರ್ಜೆಂಟ್ ಆಗಿ ಚುನಾವಣೆ ನಿಗದಿಪಡಿಸಿ; ಪೆಟ್ರೋಲ್ ​ಬೆಲೆ ಏರಿಕೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದ ಪ್ರಿಯಾಂಕಾ ಚತುರ್ವೇದಿ
ಪ್ರಿಯಾಂಕಾ ಚತುರ್ವೇದಿ
Edited By:

Updated on: Mar 26, 2022 | 12:28 PM

2021ರ ನವೆಂಬರ್​ನಿಂದ ಸ್ಥಿರವಾಗಿದ್ದ ಪೆಟ್ರೋಲ್​-ಡೀಸೆಲ್​ ದರ (Fuel Prices)ಈಗ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದೆ. ಇಂದು ಪೆಟ್ರೋಲ್​ ಬೆಲೆ ದೆಹಲಿಯಲ್ಲಿ 80 ಪೈಸೆ ಹೆಚ್ಚಳವಾಗಿದ್ದರೆ, ಮುಂಬೈನಲ್ಲಿ 85 ಪೈಸೆ ಏರಿಕೆಯಾಗಿದೆ. ಹಾಗೇ, ಡೀಸೆಲ್ ದರ ದೆಹಲಿಯಲ್ಲಿ 80 ಪೈಸೆ ಮತ್ತು ಮುಂಬೈನಲ್ಲಿ 85 ಪೈಸೆ ಹೆಚ್ಚಳವಾಗಿದೆ. ಹೀಗೆ ಕಳೆದ 4 ದಿನಗಳಿಂದ ಪೆಟ್ರೋಲ್​-ಡೀಸೆಲ್​ ದರ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಮುಂದೆ ಯಾವೆಲ್ಲ ರಾಜ್ಯಗಳಲ್ಲಿ ಚುನಾವಣೆಯಿದೆಯೋ ಅಲ್ಲೆಲ್ಲ ಆದಷ್ಟು ಬೇಗನೇ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಎಂದು ಚುನಾವಣಾ ಆಯೋಗಕ್ಕೆ (Election Commission) ಒತ್ತಾಯಿಸಿದ್ದಾರೆ. ನೀವು ಹೀಗೆ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡುವುದರಿಂದ ಇಂಧನ ಬೆಲೆ ಅನಿಯಂತ್ರಿತವಾಗಿ ಏರಿಕೆಯಾಗುವುದು ತಪ್ಪಿ, ನಿಯಂತ್ರಣವಾಗುತ್ತದೆ. ಭಾರತೀಯರು ಬೆಲೆ ಹೆಚ್ಚಳ ಬಿಸಿಯಿಂದ ಪಾರಾಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ಚುನಾವಣೆ ಬಂದರೆ ಮಾತ್ರ ಇಂಧನ ಬೆಲೆ ಏರಿಕೆಯಾಗದಂತೆ ಬಿಜೆಪಿ ಸರ್ಕಾರ ತಡೆಯುತ್ತದೆ ಎಂದಿದ್ದಾರೆ.

2021ರ ನವೆಂಬರ್​ ತಿಂಗಳಿಗೂ ಮೊದಲು ದೇಶದಲ್ಲಿ ಇಂಧನ ಬೆಲೆ ಪ್ರತಿದಿನ ಏರಿಕೆಯಾಗುತ್ತಲೇ ಇತ್ತು. ಇದು ವಾಹನ ಸವಾರರಿಗೆ ಹೊರೆಯಾಗುತ್ತಲೇ ಸಾಗಿತ್ತು. ನಂತರ ದೀಪಾವಳಿ ಮುನ್ನಾದಿನ ಅಂದರೆ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅದಾದ ಮೇಲೆ ಹಲವು ರಾಜ್ಯಸರ್ಕಾರಗಳೂ ಕೂಡ ವ್ಯಾಟ್​ ಕಡಿತ ಮಾಡಿದ ಪರಿಣಾಮ ಗ್ರಾಹಕರಿಗೆ ತುಸು ನಿರಾಳವಾಗಿತ್ತು. 2022ರ ಪ್ರಾರಂಭದಲ್ಲೇ ಐದು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಬಿಜೆಪಿ ಇಂಧನ ಬೆಲೆ ಕಡಿಮೆ ಮಾಡಿದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಹಾಗೇ ಫೆ.24ರಿಂದ ರಷ್ಯಾ-ಉಕ್ರೇನ್​ ಯುದ್ಧ ಶುರುವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಳ ನಿಶ್ಚಿತ ಎಂದೇ ಹೇಳಲಾಗಿತ್ತು.

ಹಾಗಿದ್ದಾಗ್ಯೂ ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಹೊರಬೀಳುವವರೆಗೆ ಅಂದರೆ ಮಾರ್ಚ್​ 10ರವರೆಗೂ ಏರಿಕೆಯಾಗುವುದಿಲ್ಲ ಎಂಬ ಭರವಸೆ ಇತ್ತು. ಚುನಾವಣಾ ಫಲಿತಾಂಶ ಹೊರಬಿದ್ದ 12 ದಿನಗಳ ಬಳಿಕ ಇದೀಗ ಮತ್ತೆ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಬರೀ ಪೆಟ್ರೋಲ್​-ಡೀಸೆಲ್​ ಅಲ್ಲ ದಿನ ಬಳಕೆ ವಸ್ತುಗಳ ಬೆಲೆಯೂ ತುಟ್ಟಿಯಾಗಿದೆ. ಹೀಗಿರುವಾಗ ಪ್ರಿಯಾಂಕಾ ಚತುರ್ವೇದಿ ಈ ಹೇಳಿಕೆ ನೀಡಿದ್ದಾರೆ. Elections=No fuel price rise ಎಂದೂ ವಿಶ್ಲೇಷಿಸಿದ್ದಾರೆ.

ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಚುನಾವಣೆಗೂ, ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ರಷ್ಯಾ-ಉಕ್ರೇನ್​ ಯುದ್ಧ ಶುರುವಾಗಿ ತಿಂಗಳ ಮೇಲಾಯಿತು. ಜಾಗತಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. 1951ರಲ್ಲಿ ಕೊರಿಯನ್ ಯುದ್ಧವಾದಾಗ ಜವಾಹರ್​ಲಾಲ್ ನೆಹರೂ ಕೂಡ ಹೇಳಿಕೆ ನೀಡಿ, ಕೊರಿಯನ್ ಯುದ್ಧದಿಂದಾಗಿ ಭಾರತದಲ್ಲಿ ಹಣದುಬ್ಬರ ಉಂಟಾಗಬಹುದು ಎಂದಿದ್ದರು. ಈಗ ಉಕ್ರೇನ್​-ರಷ್ಯಾ ಯುದ್ಧದಿಂದಲೂ ಅದೇ ಆಗುತ್ತಿದೆ. ಆದರೆ ಅದನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ’ ಎನ್ನುತ್ತಲೇ ಹೊಸ ಫೋಟೋ ಹಂಚಿಕೊಂಡ ರಶ್ಮಿಕಾ; ಏನಿದು ವಿಷಯ?

Published On - 12:12 pm, Sat, 26 March 22