ಸುಖಾಂತ್ಯಗೊಂಡ ಇಂಡೋ- ಉಕ್ರೇನಿಯನ್ ಪ್ರೀತಿ; ದೆಹಲಿ ನಿಲ್ದಾಣದಲ್ಲಿ ಪ್ರೇಮ ನಿವೇದನೆ- ಇಲ್ಲಿದೆ ಮನಮಿಡಿಯುವ ಕತೆ
India- Ukraine Couple Love Story: ಇಂಡೋ ಉಕ್ರೇನ್ ಪ್ರೇಮಿಗಳು ಭಾರತದಲ್ಲಿ ಜತೆಯಾಗಿದ್ದಾರೆ. ಉಕ್ರೇನ್ ಪ್ರಜೆ ಅನ್ನಾ ಹೊರೊಡೆಟ್ಸ್ಕಾ ಯುದ್ಧದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ಗೆಳೆಯ, ದೆಹಲಿ ಹೈಕೋರ್ಟ್ ವಕೀಲ ಅನುಭವ್ ಭಾಸಿನ್ರನ್ನು ಭೇಟಿಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅನುಭವ್ ಪ್ರೇಮ ನಿವೇದನೆ ಮಾಡಿದ್ದಾರೆ. ಈ ಜೋಡಿಯ ಪ್ರೇಮ ಕತೆ ಇಲ್ಲಿದೆ.
30 ವರ್ಷದ ಉಕ್ರೇನಿಯನ್ ಪ್ರಜೆ (Ukrainian Citizen) ಅನ್ನಾ ಹೊರೊಡೆಟ್ಸ್ಕಾ ಹಾಗೂ ದೆಹಲಿ ಹೈಕೋರ್ಟ್ ವಕೀಲ ಅನುಭವ್ ಭಾಸಿನ್ ಮಾರ್ಚ್ನಲ್ಲಿ ಮದುವೆಯಾಗುವುದಕ್ಕೆ ಕಾಯುತ್ತಿದ್ದರು. ಯಾವುದೇ ಆಡಂಬರವಿಲ್ಲದ ಸರಳ ಮದುವೆಯ ಯೋಚನೆಯಲ್ಲಿ ಅವರಿದ್ದರು. ಆದರೆ ಅವರ ಕನಸಿಗೆ ಅಡ್ಡಬಂದಿದ್ದು ರಷ್ಯಾ! ಹೌದು. ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸಿಬಿಟ್ಟಿತು. ಇದರಿಂದ ಉಕ್ರೇನ್ ರಾಜಧಾನಿ ಕೀವ್ನ ಬಂಕರ್ನಲ್ಲಿ ಅನ್ನಾ ಅಡಗಿಕೊಳ್ಳಬೇಕಾಯಿತು. ಅಲ್ಲಿಂದ ಕೊನೆಗೂ ಪಾರಾಗಿ ಬಂದಿರುವ ಅನ್ನಾ, ಗೆಳೆಯ ಅನುಭವ್ರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ಜೋಡಿಯ ಪ್ರೇಮ ಕತೆಯನ್ನು ಅನ್ನಾ ಹಾಗೂ ಅನುಭವ್ ಸ್ವತಃ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ‘ರಷ್ಯಾ ಹಾಗೂ ಉಕ್ರೇನ್ ಯುದ್ಧ ಆರಂಭವಾದ ಮೇಲೆ ನಮ್ಮ ನಡುವೆ ಮೂರು ಬಾರಿ ಜಗಳಗಳಾದವು’ ಎಂದು ಹೇಳಿಕೊಂಡಿರುವ ಅನ್ನಾ, ನಂತರದ ಪಯಣದ ಬಗ್ಗೆಯೂ ತಿಳಿಸಿದ್ದಾರೆ. ಈರ್ವರ ಮಾತುಗಳು ಇಲ್ಲಿವೆ.
‘‘ಮೊದಲನೆಯ ಬಾರಿಗೆ ಅನುಭವ್ ಕೀವ್ನ ತೊರೆಯಲು ಹೇಳಿದ. ಆಗ ನಾನು ರಷ್ಯಾ ನಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂದಿದ್ದೆ. ಎರಡನೇ ಬಾರಿ ಅನುಭವ್ ಹೇಗಾದರೂ ಮಾಡಿ ಟ್ರೇನ್ ಹತ್ತಿ ಬರಲು ಕೋರಿಕೊಂಡಿದ್ದರು. ಆಗ ನಾನು ನಿರಾಕರಿಸಿದ್ದೆ. ಮೂರನೇ ಬಾರಿ ನಾವು ಗಲಾಟೆ ಮಾಡಿದ್ದು, ಅನುಭವ್ ನನಗೆ ಬಂಕರ್ನಲ್ಲೇ ಉಳಿಯಲು ಹೇಳಿದ. ನಾನು ಹೇಗಾದರೂ ಮಾಡಿ ಭಾರತಕ್ಕೆ ಬರುವ ನಿರ್ಧಾರ ಮಾಡಿದ್ದೇನೆ. ನೀನು ಕಾಯುತ್ತಿರು, ನಾನು ಭಾರತಕ್ಕೆ ಬರುತ್ತೇನೆ ಎಂದಿದ್ದೆ’’ ಹೀಗೆ ಅನ್ನಾ ತಮ್ಮ ಪಯಣವನ್ನು ವಿವರಿಸಿದ್ದಾರೆ.
ಮಾರ್ಚ್ 17ರಂದು ಕೊನೆಗೂ ಭಾರತಕ್ಕೆ ಆಗಮಿಸಿದರು ಅನ್ನಾ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅನುಭವ್ ಸಂಗಡಿಗರು ಧೋಲ್ ನುಡಿಸುತ್ತಾ ಸ್ವಾಗತಿಸಿದ್ದ ವಿಶೇಷ. ಅನುಭವ್ ಅನ್ನಾ ಮುಂದೆ ಮಂಡಿಯೂರಿ ವಿಮಾನ ನಿಲ್ದಾಣದಲ್ಲೇ ಪ್ರಪೋಸ್ ಕೂಡ ಮಾಡಿದರು. ‘‘ನೀವು ನನ್ನನ್ನು ಮದುವೆಯಾಗುತ್ತೀರಾ?’’ ಎಂಬ ಅನುಭವ್ ಕೋರಿಕೆಗೆ ಅನ್ನಾ ಎಸ್ ಎಂದರು.
‘‘ನಾನು ಪ್ರಯಾಣದಿಂದ ಬಳಲಿದ್ದೆ. ಅನುಭವ್ ಅವರಿಂದ ಪ್ರಪೋಸ್ ನಿರೀಕ್ಷಿಸಿರಲಿಲ್ಲ. ಸಂತಸದಿಂದ ಯೆಸ್ ಎಂದೆ. ಅವರ ಜತೆ ಇರಲು ಕದನವನ್ನು ದಾಟಿ ಬರಬೇಕಾಯಿತು. ಅನುಭವ್ ತಾಯಿ ಹೂವಿನ ಮೂಲಕ ನನ್ನನ್ನು ಸ್ವಾಗತಿಸಿದರು. ಅದು ಬಹಳ ಚೆನ್ನಾಗಿತ್ತು’’ ಎಂದಿದ್ದಾರೆ ಅನ್ನಾ.
ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಭವ್ ಪ್ರೇಮ ನಿವೇದನೆ; ವಿಡಿಯೋ ಇಲ್ಲಿದೆ:
ಇಂಡೋ ಉಕ್ರೇನ್ ಪ್ರೇಮಿಗಳು ಭಾರತದಲ್ಲಿ ಜತೆಯಾಗಿದ್ದಾರೆ. ಉಕ್ರೇನ್ ಪ್ರಜೆ ಅನ್ನಾ ಹೊರೊಡೆಟ್ಸ್ಕಾ ಯುದ್ಧದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ಗೆಳೆಯ, ದೆಹಲಿ ಹೈಕೋರ್ಟ್ ವಕೀಲ ಅನುಭವ್ ಭಾಸಿನ್ರನ್ನು ಭೇಟಿಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅನುಭವ್ ಪ್ರೇಮ ನಿವೇದನೆ ಮಾಡಿದ್ದಾರೆ.#Ukraine #lovebirds #UkraineRussiaCrisis pic.twitter.com/JVpVZtH9gF
— TV9 Kannada (@tv9kannada) March 26, 2022
ಅನ್ನಾ- ಅನುಭವ್ ಭೇಟಿಯಾಗಿದ್ದು ಯಾವಾಗ?
2019ರಲ್ಲಿ ಅನ್ನಾ ಹಾಗೂ ಅನುಭವ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಕೀವ್ನ ಖಾಸಗಿ ಕಂಪನಿಯಲ್ಲಿ ಅನ್ನಾ ಕೆಲಸ ಮಾಡುತ್ತಿದ್ದು, ರಜೆಯ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅನುಭವ್ ಪರಿಚಯವಾಗಿ, ಈರ್ವರೂ ನಂಬರ್ ಬದಲಾಯಿಸಿಕೊಂಡಿದ್ದರು. ವಾಟ್ಸಾಪ್ನಲ್ಲಿ ಮಾತುಕತೆ ಮುಂದುವರೆಯಿತು. 2020ರಲ್ಲಿ ಅನ್ನಾ ರೋಡ್ ಟ್ರಿಪ್ಗೆಂದು ರಾಜಸ್ಥಾನಕ್ಕೆ ಆಗಮಿಸಿದರು. ಆ ಸಂದರ್ಭದಲ್ಲಿ ಲಾಕ್ಡೌನ್ ಅನೌನ್ಸ್ ಆಯಿತು.
‘‘ಅನ್ನಾಗೆ ಲಾಕ್ಡೌನ್ ಸಂದರ್ಭದಲ್ಲಿ ಸಹಾಯ ಮಾಡಿದೆ. ಆಗ ಈರ್ವರೂ ಹತ್ತಿರವಾದೆವು’’ ಎಂದಿದ್ದಾರೆ ಅನುಭವ್. 2021ರ ಫೆಬ್ರವರಿಯಲ್ಲಿ ಈರ್ವರೂ ದುಬೈನಲ್ಲಿ ಭೇಟಿಯಾದರು. ನಂತರದಲ್ಲಿ ಭಾರತದಲ್ಲಿ ಮತ್ತೆ ಭೇಟಿಯಾದರು. ವಿಶೇಷವೆಂದರೆ ಅನುಭವ್ ತಾಯಿ ಅನ್ನಾಗೆ ತಮ್ಮ ಪುತ್ರನನ್ನು ಮದುವೆಯಾಗುವಂತೆ ಕೇಳಿಕೊಂಡರು.
‘‘ನನ್ನ ಪರವಾಗಿ ನನ್ನ ತಾಯಿ ಪ್ರಪೋಸ್ ಮಾಡಿದರು. ವಿಶೇಷ ವಿವಾಹ ಕಾಯ್ದೆಯ ಅನ್ವಯ ನಮ್ಮ ಮದುವೆಯ ಸಿದ್ಧತೆಯಲ್ಲಿರುವಾಗ ರಷ್ಯಾ ಯುದ್ಧ ಘೋಷಿಸಿತು’’ ಎಂದಿದ್ದಾರೆ ಅನುಭವ್. ಕೀವ್ನಿಂದ ಅನ್ನಾ ಕೆಲವೇ ವಸ್ತ್ರಗಳೊಂದಿಗೆ ಹಾಗೂ ಅವರ ಅಜ್ಜಿ ಉಡುಗೊರೆಯಾಗಿ ನೀಡಿದ ಕಾಫಿ ಮೆಷೀನ್ನೊಂದಿಗೆ ಹೊರಟರು. ‘‘ಯುದ್ಧ ನಡೆಯುತ್ತಿದೆ. ಕಾಫಿ ಮೆಷೀನ್ ತೆಗೆದುಕೊಂಡು ಹೊರಟಿದ್ದೀರಲ್ಲ ಎಂದು ಕೇಳಿದರೆ, ಅದು ಮದುವೆಯ ಉಡುಗೊರೆ. ಅದನ್ನು ಬಿಟ್ಟು ಬರಲು ಸಾಧ್ಯವಿಲ್ಲ’’ ಎಂದು ಅನ್ನಾ ಹೇಳಿದ್ದನ್ನು ಅನುಭವ್ ನೆನಪಿಸಿಕೊಂಡಿದ್ದಾರೆ.
ಎಲ್ವಿವ್ಗೆ ತಮ್ಮ ತಾಯಿಯೊಂದಿಗೆ ತಲುಪಿದ ಅನ್ನಾ ನಂತರ ಪೋಲಿಷ್ ಗಡಿಗೆ ಬಂದರು. ಪೋಲೆಂಡ್ನಿಂದ ಎರಡು ವಾರಗಳ ಕಾಲ ಕಳೆದ ನಂತರ ಭಾರತಕ್ಕೆ ಎರಡು ವರ್ಷಗಳ ವೀಸಾ ಸಿಕ್ಕಿತು. ಅನ್ನಾ ತಾಯಿ ನಾರ್ವೆಗೆ ತೆರಳಿದ್ದು, ಅಲ್ಲಿಂದ ಅವರು ಮೆಕ್ಸಿಗೋಗೆ ತೆರಳಿ ಪತಿಯೊಂದಿಗೆ ವಾಸಿಸಲಿದ್ದಾರೆ ಎಂದು ಅನುಭವ್ ಮಾಹಿತಿ ನೀಡಿದ್ದಾರೆ.
ಅನ್ನಾಗೆ ವೀಸಾ ಕೊಡಿಸಲು ಹಗಲು- ರಾತ್ರಿ ಕಷ್ಟಪಟ್ಟಿದ್ದನ್ನು ಅನುಭವ್ ನೆನಪಿಸಿಕೊಂಡರು. ಸುಪ್ರೀಂ ಕೋರ್ಟ್ನ ಹಿರಿಯ ವಕೀಲರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಅಂತಿಮವಾಗಿ ಪೋಲೆಂಡ್ನ ಭಾರತೀಯ ರಾಯಭಾರ ಕಚೇರಿಯಿಂದ ಸಹಾಯ ದೊರಕಿತು ಎಂದಿದ್ದಾರೆ ಅನುಭವ್.
ಪ್ರಸ್ತುತ ಅನ್ನಾ ಹಾಗೂ ಅನುಭವ್ ಏಪ್ರಿಲ್ 27ರಂದು ವಿವಾಹವಾಗಲು ನಿರ್ಧರಿಸಿದ್ದಾರೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಳ್ಳುವುದಕ್ಕೆ ಅನ್ನಾ ಕಾಯುತ್ತಿದ್ದಾರೆ. ಅಲ್ಲಿ ಅವರ ಅಜ್ಜಿಯೊಂದಿಗೆ ಒಂದು ಸಾಕುಶ್ವಾನವೂ ಇದೆ. ‘‘ಉಕ್ರೇನ್ಗೆ ತೆರಳಿ ಅಲ್ಲಿಂದ ಶ್ವಾನವನ್ನು ಮರಳಿ ತರಬೇಕು. ಮುಂದಿನ ಜೀವನವನ್ನು ಭಾರತದಲ್ಲಿ ಕಳೆಯುತ್ತೇನೆ’’ ಎಂದು ಇಂಡಿಯನ್ ಎಕ್ಸ್ಪ್ರೇಸ್ಗೆ ತಿಳಿಸಿದ್ದಾರೆ ಅನ್ನಾ.
ಇದನ್ನೂ ಓದಿ:
ದೇಶದಲ್ಲಿ 24ಗಂಟೆಯಲ್ಲಿ 4100 ಮಂದಿ ಕೊರೊನಾದಿಂದ ಸಾವು; ಮೃತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಲು ಕಾರಣವೇನು?