Shocking News: ಬಾಲಕಿ ಮೇಲೆ ಅತ್ಯಾಚಾರ ಮಾಡುವಾಗ ಹೆಡ್ಮಾಸ್ಟರ್ ಬಂದರೆಂದು ಓಡಿದ ಹುಡುಗರು; ಆಮೇಲಾಗಿದ್ದು ದುರಂತ!
ಬಿಹಾರದಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳು ಹಾಗೂ ಹೆಡ್ ಮಾಸ್ಟರ್ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಲಕ್ನೋ: ಗುರುವನ್ನು ದೇವರೆಂದು ಪೂಜಿಸುವ ಕಾಲವೊಂದಿತ್ತು. ಆದರೆ, ಈಗಿನ ಕಾಲ ಬದಲಾಗಿದ್ದು, ಕೆಲವು ಶಿಕ್ಷಕರೇ ತಮ್ಮ ವಿದ್ಯಾರ್ಥಿಗಳ ಪಾಲಿನ ವಿಲನ್ ಆಗುತ್ತಿದ್ದಾರೆ. ಎಳೆಯ ಮಕ್ಕಳ ಭವಿಷ್ಯ ರೂಪಿಸಬೇಕಾಗಿದ್ದ ಶಿಕ್ಷಕ ಚಿಕ್ಕ ಬಾಲಕಿಯ ಜೀವನವನ್ನೇ ಹಾಳು ಮಾಡಿದ ಅಮಾನವೀಯ ಘಟನೆಯಿದು. 8ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಆಕೆಯ ಸಹಪಾಠಿಗಳಾಗಿದ್ದ ನಾಲ್ವರು ಹುಡುಗರು ಶಾಲೆಯ ಹಿಂದೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದರು. ಅಷ್ಟರಲ್ಲಿ ಏನೋ ಸದ್ದಾಯಿತೆಂದು ಅಲ್ಲಿಗೆ ಹೆಡ್ ಮಾಸ್ಟರ್ (Head Master) ಹೋದಾಗ ಅವರನ್ನು ಕಂಡ ಹುಡುಗರು ತಾವು ಸಿಕ್ಕಿಬೀಳುತ್ತೇವೆಂದು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಹೆಡ್ ಮಾಸ್ಟರ್ ದೇವರಂತೆ ಬಂದು ತನ್ನನ್ನು ಕಾಪಾಡಿದರು ಎಂದು ನಿಟ್ಟುಸಿರು ಬಿಟ್ಟ ಆ ಬಾಲಕಿಗೆ ಮತ್ತೊಂದು ಶಾಕ್ ಕಾದಿತ್ತು. ನೆಲದ ಮೇಲೆ ಅರೆಬರೆ ಬೆತ್ತಲೆಯಾಗಿ ಬಿದ್ದಿದ್ದ ಆ ಹುಡುಗಿಯನ್ನು ಕಾಪಾಡುವ ಬದಲು ಆಕೆಯ ಮೇಲೆ ಹೆಡ್ ಮಾಸ್ಟರ್ ಕೂಡ ಅತ್ಯಾಚಾರ ನಡೆಸಿದ್ದಾರೆ!
ಬಿಹಾರದಲ್ಲಿ ಈಗ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿದಿನ ಕಳ್ಳತನ, ಲೂಟಿ ಅಥವಾ ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಪೋಷಕರನ್ನು ಬೆಚ್ಚಿ ಬೀಳಿಸಿದೆ. ಶಾಲೆಯಲ್ಲಿ ತಮ್ಮ ಮಕ್ಕಳಿಗೆ ರಕ್ಷಣೆ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳುಹಿಸುವ ಪೋಷಕರು ಇದೀಗ ಹೆಣ್ಣುಮಕ್ಕಳನ್ನು ಓದಲು ಕಲಿಸಲು ಕೂಡ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ!
ಕೈಮೂರ್‌ನ ಬುಡಕಟ್ಟು ಸಮಾಜದವಳಾದ, 8ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳು ಹಾಗೂ ಹೆಡ್ ಮಾಸ್ಟರ್ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಆ ವಿದ್ಯಾರ್ಥಿನಿ ಮಲವಿಸರ್ಜನೆಗೆ ಪೊದೆಗಳ ಬಳಿ ಹೋಗಿದ್ದಾಗ ಆಕೆಯ ಜೊತೆ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟರಲ್ಲಿ ಹೆಡ್ ಮಾಸ್ಟರ್ ತಮ್ಮತ್ತಲೇ ಬರುತ್ತಿರುವುದನ್ನು ನೋಡಿ ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ಅಲ್ಲಿಗೆ ಬಂದು ನೋಡಿದ ಹೆಡ್ಮಾಸ್ಟರ್ಗೆ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಬದಲು ಆ ಹೆಡ್ ಮಾಸ್ಟರ್ ಕೂಡ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಇದನ್ನೂ ಓದಿ: ಆರೋಪಿಗಳ ಗುರುತು ಹಿಡಿದ ಸಂತ್ರಸ್ತೆ: ಮೈಸೂರಿನ ಪೈಶಾಚಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದ್ದೇ ಸಾಹಸಮಯ!
ಇದಾದ ಬಳಿಕ ಆ ಬಾಲಕಿ ಅಳುತ್ತಾ ಮನೆಗೆ ಬಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದು, ಏನಾಯಿತೆಂದು ವಿಚಾರಿಸಿದಾಗ ಆಕೆಯ ಮೇಲೆ ನಡೆದ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಮಗಳ ಮೇಲೆ ನಡೆದ ಈ ಕೃತ್ಯದ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದೆ. ಈ ಪ್ರಕರಣದ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಾಲೆಯ ಹೆಡ್ ಮಾಸ್ಟರ್ ಸುರೇಂದ್ರ ಕುಮಾರ್ ಭಾಸ್ಕರ್ ಎಂಬುವವರನ್ನು ಬಂಧಿಸಲಾಗಿದೆ.