
ಹಿಸಾರ್ (ಮಾರ್ಚ್ 1): ಹರಿಯಾಣದ ಹಿಸಾರ್‌ನಲ್ಲಿ ಮಹಿಳೆಯೊಬ್ಬರು ತನ್ನ ವೃದ್ಧ ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಜಾದ್ ನಗರದ ಮಾಡ್ರನ್ ಸಾಕೇತ್ ಕಾಲೋನಿಯಲ್ಲಿ ನಡೆದಿರುವ ಈ ಘಟನೆಯಲ್ಲಿಆಸ್ತಿಗಾಗಿ ಮಹಿಳೆ ತನ್ನ ತಾಯಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಆ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ರೀಟಾ ಎಂಬ ಮಹಿಳೆ ಇದೀಗ ವೈರಲ್ ಆಗಿರುವ ಮೂರು ನಿಮಿಷಗಳ ವೀಡಿಯೊದಲ್ಲಿ ತನ್ನ ತಾಯಿ ನಿರ್ಮಲಾ ದೇವಿಯೊಂದಿಗೆ ಕುಳಿತಿರುವುದನ್ನು ಕಾಣಬಹುದು. ರೀಟಾ ತನ್ನ ತಾಯಿಯನ್ನು ಬೈಯುವುದನ್ನು ಮತ್ತು ನಂತರ ಆಕೆಯ ಕಾಲಿಗೆ ಹೊಡೆಯುವುದನ್ನು ಕಾಣಬಹುದು. ನಂತರ ಆಕೆ ತನ್ನ ತೊಡೆಯನ್ನು ಕಚ್ಚಿದಾಗ ಆಕೆಯ ತಾಯಿ ನೋವಿನಿಂದ ಅಳುತ್ತಾಳೆ. ಈ ವಿಡಿಯೋದಲ್ಲಿ “ಇದು ತಮಾಷೆಯಾಗಿದೆ, ನಾನು ನಿಮ್ಮ ರಕ್ತವನ್ನು ಕುಡಿಯುತ್ತೇನೆ” ಎಂದು ರೀಟಾ ಹೇಳುವುದನ್ನು ಕೇಳಬಹುದು.
ಇದನ್ನೂ ಓದಿ: Viral: ಟ್ರೈನ್ ನಿಲ್ಲಿಸಿ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ ಲೋಕೋ ಪೈಲಟ್; ವಿಡಿಯೋ ವೈರಲ್
ಈ ವಿಡಿಯೋದಲ್ಲಿ ರೀಟಾ ತನ್ನ ತಾಯಿಯ ಕೂದಲನ್ನು ಎಳೆದು, ಕಚ್ಚುವುದನ್ನು ನೋಡಬಹುದು. ತಾಯಿ ಗೋಗರೆದರೂ ಕೇಳದೆ ಆಕೆ ಅಮ್ಮನಿಗೆ ಕಪಾಳಮೋಕ್ಷ ಮಾಡಿ, “ನೀನೇನು ಸಾಯುವುದೇ ಇಲ್ಲವೇ?” ಎಂದು ಕೇಳಿದ್ದಾಳೆ. ಬಳಿಕ ರೀಟಾ ತನ್ನ ತಾಯಿಯನ್ನು ಹಾಸಿಗೆಯಿಂದ ಒದ್ದು, ಕೂಗುತ್ತಾ ಹೊಡೆಯುತ್ತಲೇ ಇರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಬಳಿಕ ರೀಟಾಳ ಸಹೋದರ ಅಮರದೀಪ್ ಸಿಂಗ್ ಆಕೆಯ ವಿರುದ್ಧ ದೂರು ದಾಖಲಿಸಿದರು. ರೀಟಾ ತಮ್ಮ ತಾಯಿಯನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಆಸ್ತಿ ಮಾಲೀಕತ್ವವನ್ನು ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಅವರ ಪ್ರಕಾರ, ರೀಟಾ 2 ವರ್ಷಗಳ ಹಿಂದೆ ಸಂಜಯ್ ಪುನಿಯಾ ಎಂಬ ವ್ಯಕ್ತಿಯನ್ನು ವಿವಾಹವಾದರು. ಆದರೆ ಸ್ವಲ್ಪ ಸಮಯದ ನಂತರ ತಮ್ಮ ತಾಯಿಯ ಮನೆಗೆ ಮರಳಿದ್ದರು. ಕುರುಕ್ಷೇತ್ರದಲ್ಲಿರುವ ಕುಟುಂಬದ ಆಸ್ತಿಯನ್ನು 65 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಮತ್ತು ಈಗ ಅವರ ತಾಯಿಯ ಮನೆಯನ್ನು ಸಹ ಕೇಳುತ್ತಿದ್ದರು ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ