Shocking News: ಸೆಲ್ಫೀ ಹುಚ್ಚಿಗೆ ಒಂದೇ ಕುಟುಂಬದ 6 ಜನ ಬಲಿ; ಛತ್ತೀಸ್‌ಗಢದಲ್ಲೊಂದು ದುರಂತ ಘಟನೆ

| Updated By: ಸುಷ್ಮಾ ಚಕ್ರೆ

Updated on: Aug 31, 2022 | 1:59 PM

ಇಬ್ಬರು ಮಹಿಳೆಯರು ಜಲಪಾತದಲ್ಲಿ ಕೊಚ್ಚಿ ಹೋಗುವಾಗ ಅವರನ್ನು ಮುಳುಗದಂತೆ ರಕ್ಷಿಸಲು ಕುಟುಂಬದ ಇತರ ಸದಸ್ಯರು ನೀರಿಗೆ ಹಾರಿದ್ದಾರೆ. ಸುತ್ತಲೂ ಇದ್ದವರು ನೋಡನೋಡುತ್ತಿದ್ದಂತೆ ಅವರೂ ಕೂಡ ನೀರಿನಲ್ಲಿ ಮುಳುಗಿದ್ದಾರೆ.

Shocking News: ಸೆಲ್ಫೀ ಹುಚ್ಚಿಗೆ ಒಂದೇ ಕುಟುಂಬದ 6 ಜನ ಬಲಿ; ಛತ್ತೀಸ್‌ಗಢದಲ್ಲೊಂದು ದುರಂತ ಘಟನೆ
ಸೆಲ್ಫೀ ಹುಚ್ಚಿಗೆ ಒಂದೇ ಕುಟುಂಬದ 6 ಜನ ಸಾವು
Follow us on

ರಾಯ್‌ಪುರ: ಸೆಲ್ಫೀ ಹುಚ್ಚಿಗೆ ಇಡೀ ಕುಟುಂಬವೇ ಬಲಿಯಾದ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರಾಮದಾಹ ಜಲಪಾತದಲ್ಲಿ ಭಾನುವಾರ ಮಧ್ಯಪ್ರದೇಶದ ಒಂದೇ ಕುಟುಂಬದ 6 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ. ಜಲಪಾತದಲ್ಲಿ ಮನೆಯವರೆಲ್ಲರೂ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಕುಟುಂಬದ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆ ಇಬ್ಬರು ಮಹಿಳೆಯರು ಜಲಪಾತದಲ್ಲಿ ಕೊಚ್ಚಿ ಹೋಗುವಾಗ ಅವರನ್ನು ಮುಳುಗದಂತೆ ರಕ್ಷಿಸಲು ಕುಟುಂಬದ ಇತರ ಸದಸ್ಯರು ನೀರಿಗೆ ಹಾರಿದ್ದಾರೆ. ಸುತ್ತಲೂ ಇದ್ದವರು ನೋಡನೋಡುತ್ತಿದ್ದಂತೆ ಅವರೂ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಭಾನುವಾರ ಸಂಜೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸೋಮವಾರ ಬೆಳಗ್ಗೆ ಇತರ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಲ್ಫೀ ವಿಡಿಯೋ ಮಾಡುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದ ರೈಲು; ಸ್ಥಳದಲ್ಲೇ ಹೋಯ್ತು ಪ್ರಾಣ

ಮೃತರೆಲ್ಲರೂ ಮಧ್ಯಪ್ರದೇಶದ ಅವಿಭಕ್ತ ಕುಟುಂಬದವರಾಗಿದ್ದರು. ಕೊಟಾಡೋಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಮದಾಹ ಜಲಪಾತವು ರಾಜ್ಯದ ರಾಜಧಾನಿ ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿದೆ. ಈ ಜಲಪಾತದ ನೀರು ಧುಮುಕುವ ಸ್ಥಳದಲ್ಲಿ ಸ್ನಾನ ಮಾಡುತ್ತಿದ್ದ 7 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಭಾನುವಾರ ಅಧಿಕಾರಿಗಳಿಗೆ ಲಭಿಸಿತ್ತು. ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಬಳಿಕ 6 ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಯಿತು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಜಲಪಾತದಲ್ಲಿ ಜನರು ಸ್ನಾನ ಮಾಡದಂತೆ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ಇಳಿದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Wed, 31 August 22