ಅದ್ಭುತ ಕೆಲಸಗಳನ್ನು ಮಾಡಿರುವ ಪ್ರಧಾನಿ ಮೋದಿ ಇನ್ನೂ 2 ಬಾರಿ ಅಧಿಕಾರಕ್ಕೇರಬೇಕು; ದೀಪಕ್ ಪರೇಖ್
ಪ್ರಜಾಪ್ರಭುತ್ವಕ್ಕೆ ಪ್ರಬಲ ಪ್ರತಿಪಕ್ಷದ ಅಗತ್ಯವಿದೆ. ಆದರೆ ನಮ್ಮ ದೇಶದಲ್ಲಿ ಸರಿಯಾದ ವಿರೋಧ ಪಕ್ಷವೇ ಇಲ್ಲ ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷರಾಗಿರುವ ದೀಪಕ್ ಪರೇಖ್ ಟೀಕಿಸಿದ್ದಾರೆ.
ನವದೆಹಲಿ: ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅದ್ಭುತ ಕೆಲಸಗಳನ್ನು ಮಾಡಿದ್ದಾರೆ ಎಂದು ಖ್ಯಾತ ಫೈನಾನ್ಸ್ ಉದ್ಯಮಿ ದೀಪಕ್ ಪರೇಖ್ (Deepak Parekh) ಶ್ಲಾಘಿಸಿದ್ದಾರೆ. ಅತಿದೊಡ್ಡ ಪ್ಯೂರ್-ಪ್ಲೇ ಮಾರ್ಟ್‌ಗೇಜ್ ಫೈನಾನ್ಸ್ ಕಂಪನಿಯಾದ ಎಚ್‌ಡಿಎಫ್‌ಸಿ ಅಧ್ಯಕ್ಷರಾಗಿರುವ ದೀಪಕ್ ಪರೇಖ್, ಭಾರತದ ಮುಖವನ್ನು ಬದಲಾಯಿಸಲು ನರೇಂದ್ರ ಮೋದಿ ಇನ್ನೂ ಎರಡು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಗೌರವಾನ್ವಿತ ಪ್ರಧಾನಮಂತ್ರಿಯವರು ಗಮನಾರ್ಹವಾದ ಕೆಲಸವನ್ನು ಮಾಡಿದ್ದಾರೆ. ಅವರ ಜೀವನದಲ್ಲಿ ಅವರ ಏಕೈಕ ಗುರಿಯೆಂದರೆ ಭಾರತವನ್ನು ಬೆಳೆಸುವುದು, ಪ್ರಗತಿಯನ್ನು ನೋಡುವುದು. ತಾವು ಅಂದುಕೊಂಡಿದ್ದನ್ನು ಸಾಧಿಸುವುದರಲ್ಲಿಯೇ ಅವರು ತಮ್ಮ ಸಮಯವನ್ನು ಕಳೆಯುತ್ತಾರೆ” ಎಂದು ಪರೇಖ್ ಹೇಳಿದ್ದಾರೆ.
ಇದನ್ನೂ ಓದಿ: ಸೆ. 1, 2ರಂದು ಕೇರಳ, ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಂಗಳೂರಿನಲ್ಲಿ 3,800 ಕೋಟಿ ರೂ. ಯೋಜನೆಗಳಿಗೆ ಚಾಲನೆ
“ಅಭ್ಯುದಯ ವಾತ್ಸಲ್ಯಂ” ಪತ್ರಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಪ್ರಬಲ ಪ್ರತಿಪಕ್ಷದ ಅಗತ್ಯವಿದೆ. ಆದರೆ ನಮ್ಮ ದೇಶದಲ್ಲಿ ಸರಿಯಾದ ವಿರೋಧ ಪಕ್ಷವೇ ಇಲ್ಲ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವೆ ಹೋಲಿಸಲು ಯಾವುದೇ ಕಾರಣಗಳಿಲ್ಲ ಎಂಬುದು ಜನರಿಗೂ ತುಂಬಾ ಸ್ಪಷ್ಟವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಮುಂದಿನ 25 ವರ್ಷಗಳು ಭಾರತಕ್ಕೆ ಬಹಳ ಉತ್ತಮವಾಗಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ಹೊರರಾಜ್ಯಗಳಿಗೆ ಹೋಗಿರುವ ಬಹಳಷ್ಟು ಯುವಕರು ಇದೀಗ ಭಾರತದಲ್ಲಿ ಇರುವ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸ್ವಇಚ್ಛೆಯಿಂದ ನಮ್ಮ ದೇಶಕ್ಕೆ ಮರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.