ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಂದ ಮಹಿಳೆ; ಔರಂಗಾಬಾದ್‌ನಲ್ಲಿ ಶಾಕಿಂಗ್ ಘಟನೆ
ಇತ್ತೀಚೆಗೆ ಅಕ್ರಮ ಸಂಬಂಧದ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲ್ಲುವವರ ಸಂಖ್ಯೆ ಹೆಚ್ಚಾಗಿದೆ. ಬಿಹಾರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಜೂನ್ 25ರಂದು ಬಂದೇಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೌನಾ ಗ್ರಾಮದ ಹೊಲದಲ್ಲಿ ಔರಂಗಾಬಾದ್ ಮಹಿಳೆಯ ಪತಿಯ ಶವ ಪತ್ತೆಯಾದ ನಂತರ ಆ ಮಹಿಳೆಯನ್ನು ಬಂಧಿಸಲಾಯಿತು. ಆಕೆಯೇ ಗಂಡನ ಕೊಲೆ ಮಾಡಿದ್ದಾಳೆಂಬುದಕ್ಕೆ ಪೊಲೀಸರಿಗೆ ಸಾಕ್ಷಿಗಳು ಸಿಕ್ಕವು.

ಔರಂಗಾಬಾದ್, ಜೂನ್ 28: ಕೌಟುಂಬಿಕ ಸಂಬಂಧದಲ್ಲಿ ಕಲಹ ಉಂಟಾಗಿ, ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪ್ರಿಯಕರನ ಸಹಾಯದಿಂದ ಗಂಡನ ಕೊಲೆಗೆ ಸಂಚು ರೂಪಿಸಿ, ಆತನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ದೇಶಾದ್ಯಂತ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಜೂನ್ 25ರಂದು ಬಂದೇಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೌನಾ ಗ್ರಾಮದ ಬಳಿಯ ಹೊಲದಲ್ಲಿ ಪತಿಯ ಶವ ಪತ್ತೆಯಾದ ಸ್ವಲ್ಪ ಸಮಯದ ನಂತರ, ಆ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮೃತರನ್ನು ಬಿಕ್ಕು ಎಂದು ಗುರುತಿಸಲಾಗಿದೆ. “ಮಹಿಳೆಯನ್ನು ಜೂನ್ 25ರಂದು ಬಂಧಿಸಲಾಯಿತು. ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಹಿಳೆ ಮತ್ತು ಅವರ ಪ್ರೇಮಿ ಇಬ್ಬರೂ ಸೇರಿ ಮಾಡಿದ್ದಾರೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕೆಲಸದಿಂದ ತೆಗೆದಿದಕ್ಕೆ ಮುಂಬೈ ಮೂಲದ ಉದ್ಯಮಿಯನ್ನು ಕೊಲೆ ಮಾಡಲು ಯತ್ನ
ಮೃತರ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂದು ತನಿಖಾ ತಂಡವು ಕಂಡುಹಿಡಿದಿದೆ. ಆ ಮಹಿಳೆಯ ಪ್ರಿಯಕರನನ್ನು ಬಂಧಿಸಲು ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಅವರ ವಿವಾಹದ ಸುಮಾರು 1 ತಿಂಗಳ ನಂತರ ಪತಿಗೆ ವಿಷಪ್ರಾಶನ ಮಾಡಿ ಕೊಂದ ಆರೋಪದ ಮೇಲೆ 20 ವರ್ಷದ ಮಹಿಳೆಯನ್ನು ಬಂಧಿಸಲಾಯಿತು. ಆ ಮಹಿಳೆಯ ಅತ್ತೆ ಪೊಲೀಸರಿಗೆ ದೂರು ನೀಡಿದ ನಂತರ ಆಕೆಯನ್ನು ಬಂಧಿಸಲಾಯಿತು. ಆರೋಪಿಯನ್ನು ಜೂನ್ 17ರಂದು ಜೈಲಿಗೆ ಕಳುಹಿಸಲಾಯಿತು. ಜೂನ್ 15ರಂದು ರಾಂಕಾ ಪೊಲೀಸ್ ಠಾಣೆ ವ್ಯಾಪ್ತಿಯ ಬಹೋಕುದಾರ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Sat, 28 June 25




