ಕೆಲಸದಿಂದ ತೆಗೆದಿದಕ್ಕೆ ಮುಂಬೈ ಮೂಲದ ಉದ್ಯಮಿಯನ್ನು ಕೊಲೆ ಮಾಡಲು ಯತ್ನ
ಬೆಂಗಳೂರಿನಲ್ಲಿ ಕುದುರೆ ತರಬೇತುದಾರ ಜಸ್ವೀರ್ ಸಿಂಗ್ ಮತ್ತು ಅವನ ಸಹೋದರ ಸನ್ನಿ, ಸಹಾಯಕ ಬಿಲ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಮುಂಬೈ ಮೂಲದ ಉದ್ಯಮಿ ಸುಚಿತ್ ಜಯರಾಜ್ ಷಾ ಅವರ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಲು ಯತ್ನಿಸಿದ್ದರು. ಹಣದ ವಿಚಾರದಲ್ಲಿ ಉದ್ಯಮಿ ಜಸ್ವೀರ್‌ನನ್ನು ಕೆಲಸದಿಂದ ತೆಗೆದಿದ್ದರಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು, ಜೂನ್ 28: ಕೆಲಸದಿಂದ ತೆಗದು ಹಾಕಿದ್ದಕ್ಕೆ ಮಾಲೀಕನನ್ನೇ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಹಲಸೂರು ಪೊಲೀಸ್ ಠಾಣೆ (Halasuru Police Station) ಪೊಲೀಸರು ಬಂಧಿಸಿದ್ದಾರೆ. ಕುದುರೆ ತರಬೇತುದಾರ ಜಸ್ವೀರ್ ಸಿಂಗ್, ಈತನ ತಮ್ಮ ಸನ್ನಿ, ಹಾಗೂ ಸಹಾಯಕ ಬಿಲ್ಲಾ ಬಂಧಿತ ಆರೋಪಿಗಳು. ಆರೋಪಿಗಳು ಮುಂಬೈ ಮೂಲದ ಉದ್ಯಮಿ (Mumbai based businessman) ಸುಚಿತ್ ಜಯರಾಜ್ ಷಾ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು.
ಮುಂಬೈ ಮೂಲದ ಉದ್ಯಮಿ ಸುಚಿತ್ ಜಯರಾಜ್ ಷಾ ಅವರಿಗೆ ಕುದುರೆ ರೇಸ್ ಹವ್ಯಾಸ ಇತ್ತು. ಹೀಗಾಗಿ ಸುಚಿತ್ ಜಯರಾಜ್ ಷಾ ಅವರು ರೇಸ್ ಕುದುರೆ ಖರೀದಿಸಿದ್ದರು. ಈ ಕುದುರೆಗೆ ತರಬೇತುದಾರರಾಗಿ ಆರೋಪಿ ಜಸ್ವೀರ್ ಸಿಂಗ್ನನ್ನು ನೇಮಕ ಮಾಡಿಕೊಂಡಿದ್ದರು. ಜಸ್ವೀರ್ ಸಿಂಗ್ ತರಬೇತು ನೀಡಿದ್ದ ಕುದುರೆಗಳು ಸಾಕಷ್ಟು ರೇಸ್ಗಳಲ್ಲಿ ಗೆದಿದ್ದವು.
ಇದೇ ವೇಳೆ ಸುಚಿತ್ ಜಯರಾಜ್ ಷಾ ಪಂಜಾಬ್ ಸ್ಟಡ್ ಫಾರ್ಮ್ನಿಂದ ಕುದುರೆ ಖರೀದಿ ಮಾಡಿದ್ದರು. ಈ ವ್ಯವಹಾರದಲ್ಲಿ ಕುದುರೆ ತರಬೇತುದಾರ ಜಸ್ವೀರ್ ಸಿಂಗ್ ಉದ್ಯಮಿ ಸುಚಿತ್ ಅವರಿಗೆ ಸುಮಾರು 1.5 ಲಕ್ಷ ಹಣ ಕೊಡಬೇಕಿತ್ತು.
ಈ ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಅದಕ್ಕೆ ಉದ್ಯಮಿ ಸುಚಿತ್ ಜಯರಾಜ್ ಷಾ ಅವರು ಜಸ್ವೀರ್ ಸಿಂಗ್ನನ್ನು ಕೆಲಸದಿಂದ ತೆಗೆದಿದ್ದಾರೆ. ಕೆಲಸದಿಂದ ತೆಗೆದಿದಕ್ಕೆ ಮಾಲೀಕ ಸುಚಿತ್ ಮೇಲೆ ಜಸ್ವೀರ್ ಸೇಡು ಇಟ್ಟುಕೊಂಡಿದ್ದನು. ಕಳೆದ ವಾರ ರೇಸ್ ಇದೆ ಅಂತ ಬೆಂಗಳೂರಿಗೆ ಸ್ನೇಹಿತನ ಜೊತೆ ಬಂದಿದ್ದ ಸುಚಿತ್ ಜಯರಾಜ್ ಷಾ ಪ್ರತಿಷ್ಠಿತ ಹೋಟೇಲ್ನಲ್ಲಿ ಉಳಿದುಕೊಂಡಿದ್ದರು.
ಈ ವಿಚಾರ ತಿಳಿದು ಜಸ್ವೀರ್ ಸಿಂಗ್, ಉದ್ಯಮಿ ಸುಚಿತ್ ಜಯರಾಜ್ ಷಾ ಉಳಿದುಕೊಂಡಿದ್ದ ಹೊಟೇಲ್ಗೆ ತನ್ನ ಸಹೋದರ ಸನ್ನಿ ಹಾಗೂ ಸಹಾಯಕ ಬಿಲ್ಲಾನನ್ನು ಕಳಿಸಿದ್ದನು. ಮಾತನಾಡಬೇಕು ಅಂತ ಸುಚಿತ್ ಅವರನ್ನು ಸನ್ನಿ ರಿಸ್ಪೆಷನ್ಗೆ ಕರೆಸಿಕೊಂಡಿದ್ದನು. ರಿಸ್ಪೆಷನ್ಗೆ ಬಂದ ಸುಚಿತ್ ಅವರನ್ನು ಸನ್ನಿ ಹಾಗೂ ಬಿಲ್ಲಾ ವಾಹನ ಪಾರ್ಕಿಂಗ್ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಏಕಾಏಕಿ ಶಾಪ್ಗೆ ನುಗ್ಗಿ 2 ಕೋಟಿ ರೂ ದೋಚಿದ ದುಷ್ಕರ್ಮಿ
ಅಲ್ಲಿ, ನನ್ನ ಅಣ್ಣ ಜಸ್ವೀರ್ ಗೌರವ ಹಾಳು ಮಾಡುತ್ತೀಯಾ ಅಂತ ಇಬ್ಬರೂ ಸೇರಿಕೊಂಡು ಸುಚಿತ್ ಜಯರಾಜ್ ಷಾ ಅವರ ಮೇಲೆ ಹಲ್ಲೆ ಮಾಡಿ, ಸ್ಕೂಡೈವರ್ನಿಂದ ಚುಚ್ಚಲು ಯತ್ನಿಸಿದ್ದಾರೆ. ಆದರೆ, ಸುಚಿತ್ ಅವರು ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಬಂದ ಹೋಟೆಲ್ ಸಿಬ್ಬಂದಿಯನ್ನು ನೋಡಿ ಆರೋಪಿಗಳಾದ ಸನ್ನಿ ಹಾಗೂ ಬಿಲ್ಲಾ ಪರಾರಿಯಾಗಿದ್ದಾರೆ.
ಚಿಕಿತ್ಸೆ ಪಡೆದ ಬಳಿಕ ಸುಚಿತ್ ಜಯರಾಜ್ ಷಾ ಅವರು ಆರೋಪಿಗಳಾದ ಜಸ್ವೀರ್ ಸಿಂಗ್, ಸನ್ನಿ, ಹಾಗೂ ಬಿಲ್ಲನ ವಿರುದ್ಧ ದೂರು ನೀಡಿದ್ದಾರೆ. ದೂರು ಆಧಾರದ ಮೇಲೆ ಹಲಸೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.







