Shyam Saran Negi: 106 ವರ್ಷದ ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ
India's First Voter: 2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸಲು ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಶ್ಯಾಮ್ ಶರಣ್ ನೇಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತು.
ನವದೆಹಲಿ: ಭಾರತದ ಮೊದಲ ಮತದಾರರಾಗಿರುವ ಹಿಮಾಚಲ ಪ್ರದೇಶದ (Himachal Pradesh) 106 ವರ್ಷದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು ಇಂದು ಕಿನ್ನೌರ್‌ನ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 2ರಂದು ಅವರು ಅಂಚೆ ಮತ ಚಲಾಯಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಬುಧವಾರ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು. ಕಳೆದ 35 ಬಾರಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದ ಅವರು ಈ ಬಾರಿ ಅನಾರೋಗ್ಯದಿಂದ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು. ಅವರ ಕುರಿತ ಮಾಹಿತಿ ಇಲ್ಲಿದೆ.
- ಜುಲೈ 1, 1917ರಂದು ಜನಿಸಿದ ಶ್ಯಾಮ್ ಶರಣ್ ನೇಗಿ ಅವರು 1975ರಲ್ಲಿ ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದರು.
- 1951ರಲ್ಲಿ ನೇಗಿ ಅವರು ಮತದಾನ ತಂಡದ ಸದಸ್ಯರಾಗಿದ್ದರು ಮತ್ತು ಅವರು ತಮ್ಮ ಮೊದಲ ಮತವನ್ನು ಶೋಂಥಾಂಗ್ ಮತಗಟ್ಟೆಯಲ್ಲಿ ಚಲಾಯಿಸಿದರು.
- ನೇಗಿ ಅವರು ಮೊದಲ ಚುನಾವಣಾ ಪ್ರಕ್ರಿಯೆಯಲ್ಲಿ ನಡೆದ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲಿ ಸ್ಟಾಂಪ್ ಹಾಕುವುದರಿಂದ ಹಿಡಿದು ಇವಿಎಂನಿಂದ ವಿವಿಪಿಎಟಿವರೆಗೆ ಅವರು ಭಾರತದ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ಎಂದಿಗೂ ತಪ್ಪಿಸಲಿಲ್ಲ.
- ಅವರು ಎಲ್ಲಾ ಪಂಚಾಯತ್, ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಇದುವರೆಗೆ ಎಲ್ಲ ಚುನಾವಣೆಗಳಲ್ಲೂ ಮತಗಟ್ಟೆಯಲ್ಲಿಯೇ ಮತ ಚಲಾಯಿಸಿದ್ದರು.
- 2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸಲು ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಶ್ಯಾಮ್ ಶರಣ್ ನೇಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತು.
- 2014ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ತನ್ನ #PledgeToVote ಪ್ರಚಾರಕ್ಕಾಗಿ ಗೂಗಲ್ ನೇಗಿ ಅವರ ವೀಡಿಯೊವನ್ನು ರಚಿಸಿದ ನಂತರ ನೇಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು.
- ಶ್ಯಾಮ್ ಸರನ್ ನೇಗಿ ಅವರು ತಮ್ಮ ಕೊನೆಯ ಸಂzಅಱದೇಶದಲ್ಲಿ ಪ್ರತಿ ಮತದ ಮೌಲ್ಯವನ್ನು ತಿಳಿಸುವ ಮೂಲಕ ಯುವಕರನ್ನು ಮತದಾನ ಮಾಡಲು ಪ್ರೇರೇಪಿಸಿದ್ದಾರೆ.
- ಸಾಕಷ್ಟು ಪ್ರಯತ್ನಗಳ ನಂತರ ದೇಶವು ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಪ್ರತಿ ಚುನಾವಣೆಯು ಧಾರ್ಮಿಕ ಹಬ್ಬವಾಗಿದೆ. ಆದ್ದರಿಂದ ಜನರು ತಪ್ಪದೇ ಮತ ಚಲಾಯಿಸಬೇಕು. ಇದರಿಂದ ಒಳ್ಳೆಯ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂದು ಅವರು ಸಂದೇಶ ನೀಡಿದ್ದರು.
- ಕಿನ್ನೌರ್ ಜಿಲ್ಲಾಧಿಕಾರಿ ಅಬಿದ್ ಹುಸೇನ್ ಅವರು ಶ್ಯಾಮ್ ಶರಣ್ ನೇಗಿ ಅವರ ಅಂತ್ಯಕ್ರಿಯೆಯನ್ನು ಕಲ್ಪಾದಲ್ಲಿರುವ ಅವರ ಗ್ರಾಮದಲ್ಲಿ ಪೂರ್ಣ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.
- ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಕೂಡ 106 ವರ್ಷ ವಯಸ್ಸಿನ ಶ್ಯಾಮ್ ಶರಣ್ ನೇಗಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಸ್ವತಂತ್ರ ಭಾರತದ ಮೊದಲ ಮತದಾರ ಮತ್ತು ಕಿನ್ನೌರ್‌ಗೆ ಸೇರಿದ ಶ್ಯಾಮ್ ಶರನ್ ನೇಗಿಜೀ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು” ಎಂದು ಸಿಎಂ ಜೈರಾಮ್ ಠಾಕೂರ್ ಟ್ವೀಟ್ ಮಾಡಿದ್ದಾರೆ.